ದಲಿತರ ಮೇಲಿನ ದೌರ್ಜನ್ಯ ನಿಲ್ಲದಿದ್ದರೆ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು, ಎಂದು ದಲಿತ ಸಂಘಟನೆಗಳ ಒಕ್ಕೂಟದಿಂದ ಎಚ್ಚರಿಕೆ ನೀಡಿದರು.
ಹಾಸನ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾರ್ಯಕರ್ತರು, “ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಆದಿಹಳ್ಳಿ ಗ್ರಾಮದ ಅಂದಾಜು 300 ಎಕರೆ ಜಮೀನು 15ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಸೇರಿದ್ದು, ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಫಲವಾಗಿದೆ” ಎಂದು ಆರೋಪಿಸಿದರು.
“ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು, ಈ ಜಮೀನುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅರಸೀಕೆರೆ ತಾಲೂಕಿನ ಜಾಜೂರು ಗ್ರಾಮ ಪಂಚಾಯಿತಿಗೆ ಸೇರುವ 16 ಎಕರೆ ಜಾಗದಲ್ಲಿ ಈಗಾಗಲೇ 12 ಎಕರೆ ಗೋಮಾಳ ಜಾಗವಿದ್ದು, 40 ವರ್ಷಗಳಿಂದ ದಲಿತ ಕುಟುಂಬದ 35 ಮಂದಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಜಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು 400 ನಿವೇಶನಗಳನ್ನು ಮಾಡಿ ಮಾರಾಟ ಮಾಡುವ ಬಹುಕೋಟಿಯ ಅವ್ಯವಹಾರ ನಡೆಸಿರುವುದು ಕಂಡುಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು” ಎಂದು ದಸಂಸ ಕಾರ್ಯಕರ್ತರು ಆಗ್ರಹಿಸಿದರು.
“ಅರಸೀಕೆರೆ ತಾಲೂಕಿನಲ್ಲಿ ಅನ್ಯಾಯದ ವಿರುದ್ಧ ಪ್ರಶ್ನಿಸಿದ ಎನ್ ಆರ್ ಸಂತೋಷ್ ವಿರುದ್ಧ ಶಾಸಕರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ ಗಡಿಪಾರು ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಶಾಸಕರಿಂದ ಇದೇ ರೀತಿ ವರ್ತನೆ ಮುಂದುವರೆದರೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಪೈಶಾಚಿಕ ಕೃತ್ಯ; ಕರುವಿನ ಮೇಲೆ ಮಾರಣಾಂತಿಕ ಹಲ್ಲೆ
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಶಿವನ್ ರಾಜ್, ರಾಜೇಂದ್ರ, ಭೋಜನಾಯಕ್, ಉಮೇಶ್, ವೇಣು, ಭಾಸ್ಕರ್ ಸೇರಿದಂತೆ ಇತರರು ಇದ್ದರು.