ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಅವಹೇಳನ ಹೇಳಿಕೆ ನೀಡಿರುವು ವಕೀಲ ದೇವರಾಜೇಗೌಡನ ವಿರುದ್ಧ ಹಾಸನ ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.
ಹಾಸನ ನಗರದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಚಂದ್ರಶೇಖರ್, “ಹಾಸನಾಂಬ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ಉತ್ತಮ ರೀತಿಯಲ್ಲಿ ನಡೆದಿದೆ. ಕಳೆದ ಬಾರಿಗಿಂತ ಆರು ಲಕ್ಷಕ್ಕೂ ಹೆಚ್ಚು ಮಂದಿ ಈ ವರ್ಷ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಬದ್ಧತೆ ಇಲ್ಲದ, ಜಾಮೀನಿನ ಮೇಲೆ ಹೊರ ಬಂದಿರುವ ವಕೀಲ ದೇವರಾಜೇಗೌಡ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ದೇವರಾಜೇಗೌಡನ ಮಾತಿನಲ್ಲಿ ಹಿಡಿತವಿಲ್ಲ ಹಾಗೂ ಸತ್ಯಾಂಶವಿಲ್ಲ” ಎಂದು ತಿಳಿಸಿದರು.
“ಹಾಸನಾಂಬ ಉತ್ಸವದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಯಾವುದೇ ಲೋಪವಾಗಿದ್ದರೆ ಕಾನೂನಾತ್ಮಕವಾಗಿ ಪ್ರಶ್ನಿಸಬೇಕು. ಅದನ್ನು ಬಿಟ್ಟು ಮಸಿ ಬಳಿಯುವುದಾಗಿ ಉಡಾಫೆಯಾಗಿ ಮಾತನಾಡುವುದು ಸರಿಯಲ್ಲ. ಅವರಿಗೆ ತಾಕತ್ತಿದ್ದರೆ ಮಸಿ ಬಳಿಯಲಿ. ನಂತರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ದೇವರಾಜೇಗೌಡನಿಗೆ ತಕ್ಕ ಉತ್ತರವನ್ನು ನೀಡಲಿದ್ದೇವೆ” ಎಂದು ಕಾಂಗ್ರೆಸ್ ಮುಖಂಡ ಎಚ್ಚರಿಸಿದರು.
“ವಿಶೇಷ ಪಾಸ್‌ಗಳನ್ನು ಎಲ್ಲ ಜನಪ್ರತಿನಿಧಿಗಳಿಗೂ ನೀಡಲಾಗಿದೆ. ದೇವರಾಜೇಗೌಡ ಅವರೂ ಸಹ ಪಾಸುಗಳನ್ನು ಪಡೆದಿದ್ದಾರೆ. ಆದರೂ ಉಸ್ತುವಾರಿ ಸಚಿವರ ವಿರುದ್ಧ ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಕೇವಲ ಪ್ರಚಾರಕ್ಕೋಸ್ಕರ ದೇವರಾಜೇಗೌಡ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆಯೂ ಮಾಜಿ ಸಚಿವ ಎಚ್ ಡಿ ರೇವಣ್ಣ, ಮಾಜಿ ಶಾಸಕ ಪ್ರೀತಮ್ ಗೌಡ ವಿರುದ್ಧವೂ ಮಾತನಾಡಿದ್ದಾರೆ. ಅವರ ವರ್ತನೆ ಇದೇ ರೀತಿ ಮುಂದುವರೆದರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಕೈಗೊಳ್ಳುತ್ತೇವೆ” ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಜ. 1ರಿಂದ ಮಾ. 31 ವರೆಗೆ ರಾಗಿ,ಭತ್ತ, ಬಿಳಿಜೋಳ ಖರೀದಿ: ಜಿಲ್ಲಾಧಿಕಾರಿ ಸತ್ಯಭಾಮ
ಈ ವೇಳೆ ಎಚ್ ಆರ್ ವಿನೋದ್ ಕುಮಾರ್, ಅಸ್ಲಾಂ, ರಾಮೇಗೌಡ, ಪ್ರಕಾಶ್ ಮತ್ತು ಕಾಂಗ್ರೆಸ್ ಮುಖಂಡರು ಇದ್ದರು.
