ಹಾಸನ | ಜನಾರೋಗ್ಯ ಸ್ವಾತಂತ್ರ್ಯಕ್ಕಾಗಿ ಆ.15ರಂದು ಧರಣಿ ಸತ್ಯಾಗ್ರಹ

Date:

Advertisements

ಹಾಸನ ನಗರದಲ್ಲಿನ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಆರಂಭಿಸುವಂತೆ ಹಾಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐಪಿಎಚ್ಎಸ್) ಅನುಗುಣವಾಗಿ ಸೌಲಭ್ಯಗಳನ್ನು ನೀಡಿ ಉನ್ನತೀಕರಿಸಿ ಸಬಲೀಕರಿಸುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ‘ಜನಾರೋಗ್ಯಕ್ಕಾಗಿ ಜನಾಂದೋಲನ’ ಆರಂಭಿಸಲಾಗಿದ್ದು, ಇದರ ಭಾಗವಾಗಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಹಾಸನದ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೂತನ ಕಟ್ಟಡದ ಮುಂದೆ ‘ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹʼ ನಡೆಸಲಾಗುವುದು ಎಂದು ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ಸದಸ್ಯ ಹೆಚ್ ಆರ್ ನವೀನ್ ಕುಮಾರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಆಗಮಿಸಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ” ಎಂದರು.

“ಜನಾರೋಗ್ಯದ ಪರಿಸ್ಥಿತಿ ಎಷ್ಟು ತೀವ್ರವಾಗಿ ಉಲ್ಬಣಗೊಂಡಿದೆ ಎಂದರೆ, ಎಲ್ಲಾ ವಯಸ್ಸಿನವರಲ್ಲಿ ಹೃದಯಾಘಾತ, ಹೃದಯ ಸ್ತಂಭನ ಮತ್ತು ಹಠಾತ್ ಮರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇಂದಿನ ಜನಾರೋಗ್ಯ ತುರ್ತುಸ್ಥಿತಿಯಲ್ಲಿರುವುದರ ಮುನ್ಸೂಚನೆಯಾಗಿದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಸ್ಥೂಲಕಾಯತೆ ಮುಂತಾದ ದೈಹಿಕ ವ್ಯತ್ಯಾಸಗಳು ತೀವ್ರವಾಗಿ ಮತ್ತು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಇದರಿಂದಾಗಿ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿ ಸಮಸ್ಯೆ, ಮೆದುಳು ಮತ್ತು ನರರೋಗ, ಕ್ಯಾನ್ಸರ್ ಮತ್ತಿತರೆ ಮಾರಣಾಂತಿಕ ಖಾಯಿಲೆಗಳು ಎಲ್ಲಾ ವಯೋಮಾನದ ಜನರಲ್ಲಿ ಹೆಚ್ಚಾಗುತ್ತಿವೆ. ಹೀಗಾಗಿ ಸೂಕ್ತ ಸಮಯದಲ್ಲಿ ರೋಗ ಪತ್ತೆ, ಸೂಕ್ತ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ದೊರೆಯದೆ ಮರಣಗಳು ಹೆಚ್ಚಾಗುತ್ತಿವೆ. ಜೊತೆಗೆ ಖಾಸಗಿಯಲ್ಲಿ ದುಬಾರಿಯಾದ ತಪಾಸಣೆ ಮತ್ತು ಚಿಕಿತ್ಸೆಗೆ ಒಳಗಾದವರು ಆರ್ಥಿಕ ದುಸ್ಥಿತಿಗೆ ತಳ್ಳಲ್ಪಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಜನರು ಖಾಸಗಿ ವ್ಯವಸ್ಥೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿಂದಾಗಿ ತೀವ್ರ ಆರ್ಥಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತದೆ” ಎಂದರು.

Advertisements

ಜನಪರ ಚಳುವಳಿಗಳ ಒಕ್ಕೂಟದ ಹಕ್ಕೊತ್ತಾಯಗಳನ್ನು ಅತ್ಯಂತ ತುರ್ತಾಗಿ ಆದ್ಯತೆಯ ಮೇರೆಗೆ ಪರಿಗಣಿಸಿ ಈ ಬೇಡಿಕೆಗಳು ಈಡೇರಿಸಬೇಕೆಂದು, ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಆಗ್ರಹಿಸಿ, ಆಗಸ್ಟ್ ೧೫ ರಂದು ಶುಕ್ರವಾರ ಸ್ವಾತಂತ್ರ್ಯ ದಿನದಂದು ಬೆಳಗ್ಗೆ 10.30 ರಿಂದ ‘ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹದಲ್ಲಿ ಹಾಸನ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಮತ್ತು ನಾಗರೀಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗಿಳಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಈ ವೇಳೆ ವಿಜಯ್ ಕುಮಾರ್ ಮಾತನಾಡಿ, “ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸೆಷನ್ ನಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಪಕ್ಷಾತೀತವಾಗಿ ಒಕ್ಕೊರಲಿನಿಂದ ಮಾಡಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹಾಸನ | ಆ.15ರಂದು ಜನಾರೋಗ್ಯ ಸ್ವಾತಂತ್ರ‍್ಯಕ್ಕಾಗಿ ಸಾಮೂಹಿಕ ಧರಣಿ: ಧರ್ಮೇಶ್

ಮನವಿ ಮಾಡಿದ ಹಕ್ಕೊತ್ತಾಯಗಳು:

  1. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಮಿಕ್ಕ ಆಸ್ಪತ್ರೆಯ ಕಟ್ಟಡದ ತುರ್ತು ಕಾಮಗಾರಿ, ವೈದ್ಯಕೀಯ ಯಂತ್ರೋಪಕರಣ, ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ನೇಮಕಾತಿಗಾಗಿ ಸದ್ಯದ ಆಂದಾಜಿನ ಪ್ರಕಾರ ಕನಿಷ್ಠ 60 ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ. ಹೃದ್ರೋಗ ಶಸ್ತ್ರಚಿಕಿತ್ಸೆ, ನರರೋಗ, ನರರೋಗ ಶಸ್ತ್ರಚಿಕಿತ್ಸೆ, ಮೂತ್ರಪಿಂಡ, ಗ್ಯಾಸ್ಪೋ ಎಂಟಾಲಜಿ, ಕ್ಯಾನ್ಸರ್, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಮಾರಣಾಂತಿಕ ರೋಗ ತಪಾಸಣೆಯ ಹತ್ತು ವಿಶೇಷ ವಿಭಾಗಗಳ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲು ಇಲ್ಲಿ ಸಾಧ್ಯತೆ ಇದ್ದು, ಇಲ್ಲಿ ರೋಗ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು. ಕ್ಯಾತ್ ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ನುರಿತ ತಜ್ಞ ವೈದ್ಯರು, ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳನ್ನು ನೇಮಕ ಮಾಡಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಅನುಕೂಲಗಳನ್ನು ತುರ್ತಾಗಿ ಒದಗಿಸಿ, ಕೂಡಲೇ ಸರ್ಕಾರವು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು.

    2. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳಿಗೆ ಐ.ಪಿ.ಎಚ್.ಎಸ್. ಮಾನದಂಡಗಳ ಅನುಸಾರ ಪ್ರಾಥಮಿಕ ಸೌಲಭ್ಯಗಳಾದ ಸುಸಜ್ಜಿತ ವೈದ್ಯಕೀಯ ಪ್ರಯೋಗಾಲಯ, ಇಸಿಜಿ, ಎಕೋ, ಎಕ್ಸೆ, ತುರ್ತು ಚಿಕಿತ್ಸಾ ಘಟಕ ಮತ್ತು ಅಂಬುಲೆನ್ಸ್ ಹಾಗೂ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳನ್ನು ಒದಗಿಸಬೇಕು. ತಾಲ್ಲೂಕು ಆಸ್ಪತ್ರೆಗಳನ್ನು ಐ.ಪಿ.ಎಚ್.ಎಸ್. ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿ ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಹಾಗೂ ಇನ್ನಿತರೆ ಮಾರಣಾಂತಿಕ ಖಾಯಿಲೆಗಳ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು.

    3. ಆರೋಗ್ಯ ತಪಾಸಣೆಗಾಗಿ ಮತ್ತು ಅವಶ್ಯಕ ಪರೀಕ್ಷೆಗಳಿಗಾಗಿ ಎಲ್ಲ ವೈದ್ಯಕೀಯ ಸೌಲಭ್ಯವನ್ನುಳ್ಳ ಸಂಚಾರಿ ವೈದ್ಯಕೀಯ ವಾಹನ ವ್ಯವಸ್ಥೆಯನ್ನು ಏರ್ಪಡಿಸಿ, ಅದು ನಿಯಮಿತವಾಗಿ ಜಿಲ್ಲೆಯ ಪ್ರತಿ ಹಳ್ಳಿಯನ್ನು ತಲುಪುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚುಗೊಳಿಸಿ ಮತ್ತು ನಿಯಮಿತಗೊಳಿಸಬೇಕು. ಆ ಮೂಲಕ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದವರನ್ನು ಗುರ್ತಿಸಲು ಸಾಧ್ಯವಾಗುತ್ತದೆ. ಆರೋಗ್ಯ ಸಹಾಯವಾಣಿಯು ಕುರ್ತಾದ ಸಮರ್ಪಕವಾದ ಮತ್ತು ಗುಣಮಟ್ಟದ ಸೇವೆಯನ್ನು ನೀಡುತ್ತಿಲ್ಲ ಇದನ್ನು ತಕ್ಷಣವೇ ಚುರುಕುಗೊಳಿಸಬೇಕು ಹಾಗೂ ತುರ್ತು ಸೇವೆಗಾಗಿ ಅಂಬುಲೆನ್ಸ್‌ಗಳ ಸಂಖ್ಯೆಯನ್ನು ಎಲ್ಲ ತಾಲ್ಲೂಕುಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಿಸಬೇಕು. ಮತ್ತದು ಸಮರ್ಪಕ, ಗುಣಮಟ್ಟದ, ತಕ್ಷಣದ ಸೇವೆಯನ್ನು ನೀಡುವುದನ್ನು ಖಾತ್ರಿಗೊಳಿಸಬೇಕು.

    4. ಕೋವಿಡ್ ಲಸಿಕೆಯ ದೂರಗಾಮಿ ಪರಿಣಾಮಗಳಿಂದಾಗಿ ಈ ಬಗೆಯ ಆರೋಗ್ಯ ತುರ್ತು ಪರಿಸ್ಥಿತಿಯು ಎಲ್ಲೆಡೆ ಉಂಟಾಗುತ್ತಿದೆ ಎಂಬ ಅನುಮಾನವು ಜನರನ್ನು ಕಾಡುತ್ತಿದ್ದು, ಈ ಕುರಿತು ಪ್ರತಿ ಆಕಸ್ಮಿಕ ಮತ್ತು ಹಠಾತ್ ಸಾವಿಗೀಡಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಿ, ಪ್ರತ್ಯೇಕ ಮತ್ತು ಆಳವಾದ ಕೂಲಂಕುಷ ಅಧ್ಯಯನ ನಡೆಸಿ, ವರದಿ ಬಿಡುಗಡೆ ಮಾಡುವ ಮೂಲಕ ಜನರಲ್ಲಿರುವ ಅನುಮಾನಗಳನ್ನು ದೂರ ಮಾಡಬೇಕು.

    5. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ವಿಕೇಂದ್ರೀಕೃತವಾಗಿ ಜನರಿಗೆ ಆರೋಗ್ಯ ಸೇವೆ ಸಲ್ಲಿಸಲು ತಳ ಹಂತದ ವ್ಯವಸ್ಥೆಯಲ್ಲಿ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ, ವೈದ್ಯಕೀಯೇತರ, ಆಶಾ ಕಾರ್ಯಕರ್ತೆಯರು ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪ್ರತಿ ನೌಕರರು ಹಾಗೂ ಕಾರ್ಮಿಕರನ್ನು ಖಾಯಂ ಮಾಡಬೇಕು. ತನ್ಮೂಲಕ ಅವರು ಪೂರ್ಣ ಏಕಾಗ್ರತೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕು.

    6. ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ, ಯುವಜನರಿಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ, ಕಣ್ಣು, ಕಿವಿ, ಸ್ಕೂಲಕಾಯ ಮತ್ತಿತರೆ ಪ್ರಾಥಮಿಕ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಮಾಡಿಸಬೇಕು. ಹಾಗೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಕಡ್ಡಾಯಗೊಳಿಸಿ. ಪ್ರತಿ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳಿಸಬೇಕು.

    7. ಜನರಲ್ಲಿ ಆರೋಗ್ಯ ಸಾಕ್ಷರತೆ ಮೂಡಿಸಲು ಪರಿಣಾಮಕಾರಿ ಯೋಜನೆ, ಕಾರ್ಯಕ್ರಮ ರೂಪಿಸಬೇಕು ನಗರ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ಪೌಷ್ಟಿಕ ಆಹಾರ, ನೈರ್ಮಲ್ಯ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಮಾನಸಿಕ ಒತ್ತಡ ನಿವಾರಣೆಯ ಕುರಿತು ಜನಜಾಗೃತಿ ಮೂಡಿಸಬೇಕು. ಎಲ್ಲಾ ಶಿಕ್ಷಣ, ಔದ್ಯೋಗಿಕ ಸಂಸ್ಥೆಗಳಲ್ಲಿ, ಘಟಕಗಳಲ್ಲಿ ಹಾಗೂ ಇಲಾಖೆಗಳಲ್ಲಿ ಮಾನಸಿಕ ಒತ್ತಡ ನಿರ್ವಹಣೆಗೆ ಅನುಕೂಲವಾಗುವಂತೆ ಕನಿಷ್ಠ ಒಬ್ಬರು ತಜ್ಞ ಆಪ್ತ ಸಮಾಲೋಚಕರನ್ನು (ಕೌನ್ಸಲರ್) ನೇಮಿಸಬೇಕು.

    8. ಹಾಸನ ನಗರವೂ ಸೇರಿದಂತೆ ಎಲ್ಲಾ ನಗರಗಳಲ್ಲಿರುವ ಉಪಹಾರ ಗೃಹಗಳು, ರೆಸ್ಟೋರೆಂಟ್, ಹೊಟೇಲ್‌ಗಳು, ಫಾಸ್ಟ್ ಫುಡ್ ಕೋರ್ಟ್ ಮತ್ತು ಬೀದಿಬದಿಯ ಆಹಾರಗಳು ಮತ್ತು ಪಾನೀಯಗಳ ಗುಣಮಟ್ಟವನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸಿ, ಆರೋಗ್ಯಕರವಾಗಿರುವುದನ್ನು ಖಾತ್ರಿಪಡಿಸಬೇಕು. ಹಾಗೂ ಯಾವುದೇ ಹಾನಿಕಾರಕ ರಾಸಾಯನಿಕ, ಕೃತಕ ಹಾಗೂ ಕಲುಷಿತ ಎಣ್ಣೆ ಮತ್ತು ಕೃತಕ ಬಣ್ಣಗಳು ಬಳಕೆಯಾಗದಂತೆ ಎಚ್ಚರಿಕೆವಹಿಸಬೇಕು.

    9. ಈಗಾಗಲೇ ನಿಷೇಧಿಸಲ್ಪಟ್ಟ ಅಪಾಯಕಾರಿ ಕೀಟ ನಾಶಕಗಳನ್ನು ಶುಂಠಿ ಸೇರಿದಂತೆ ವಿವಿದ ಬೆಳೆಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಆರೋಗ್ಯದ ಮೇಲಾಗುವ ದೂರಗಾಮಿ ಕೆಟ್ಟ ಪರಿಣಾಮಗಳನ್ನು ತಡೆಯಲು, ಕೃಷಿಯಲ್ಲಿ ಅಪಾಯಕಾರಿ ಕ್ರಿಮಿ/ಕೀಟನಾಶಕಗಳು ಮತ್ತು ರಾಸಾಯನಿಕಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲೆ ನಿಯಂತ್ರಣ ಹೇರಬೇಕು.

    10. ಹಾಸನ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಮದ್ಯದ ಅಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಕಡಿವಾಣ ಮತ್ತು ನಿಯಂತ್ರಣ ಹಾಕಬೇಕು ಹಾಗೂ ಇವುಗಳಿಗೆ ಹೊಸದಾಗಿ ಯಾವುದೇ ಪರವಾನಗಿ ನೀಡಬಾರದು. ಬದಲಿಗೆ ಹಾಸನ ಮಹಾನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ನಗರಗಳ ಪ್ರತೀ ಬಡಾವಣೆಗಳಲ್ಲಿ ಉದ್ಯಾನವನಗಳು ಮತ್ತು ಆಟದ ಮೈದಾನಗಳನ್ನು ಆದ್ಯತೆಯ ಆಧಾರದಲ್ಲಿ ನಿರ್ಮಿಸಬೇಕು.

    ಇದನ್ನೂ ಓದಿ: ಹಾಸನ | ಯುವ ಸಬಲೀಕರಣ ಸಂವಾದದಲ್ಲಿ ಶ್ರೇಯಸ್ ಭಾಗಿ

      ಈ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯ್ ಕುಮಾರ್, ಮಮತಾ ಶಿವು, ಚಿನ್ನೇನಹಳ್ಳಿ ಸ್ವಾಮಿ, ಬೀದಿ ಬದಿ ವ್ಯಾಪಾರಿಗಳ ಸಂಘದ ಸಮೀರ್ ಅಹಮದ್ ಉಪಸ್ಥಿತರಿದ್ದರು.

      eedina
      ಈ ದಿನ ಡೆಸ್ಕ್‌
      Website |  + posts

      ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

      ಪೋಸ್ಟ್ ಹಂಚಿಕೊಳ್ಳಿ:

      LEAVE A REPLY

      Please enter your comment!
      Please enter your name here

      ಪೋಸ್ಟ್ ಹಂಚಿಕೊಳ್ಳಿ:

      ಈ ಹೊತ್ತಿನ ಪ್ರಮುಖ ಸುದ್ದಿ

      ವಿಡಿಯೋ

      ಇದೇ ರೀತಿಯ ಇನ್ನಷ್ಟು ಲೇಖನಗಳು
      Related

      ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

      ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

      ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

      ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

      ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

      ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್...

      ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

      ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

      Download Eedina App Android / iOS

      X