ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ, ಮಹಿಳೆಯರ ಘನತೆಗೆ ಕುಂದುಂಟಾಗುವಂತಹ ವೀಡಿಯೋಗಳು (ಮೀಮ್ಸ್‌ಗಳು) ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ. ಈ ವಿಡಿಯೋಗಳನ್ನು ತಯಾರಿಸಿದವರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದವರ ವಿರುದ್ದ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಒಗ್ಗೂಡಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರು.
“ಹಾಸನ ಜಿಲ್ಲೆಯಲ್ಲಿನ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣವು ಪೆನ್‌ಡ್ರೈವ್‌ಗಳ ಮೂಲಕ ಬಹಿರಂಗವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಈ ವಿಷಯವನ್ನು ಬಳಸಿಕೊಂಡು ಕಿಡಿಗೇಡಿಗಳು ವ್ಯಂಗ್ಯದ ವಿಡಿಯೋಗಳನ್ನು(ಮೀಮ್ಸ್‌ಗಳನ್ನು) ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಿಡಿಯೋಗಳು ಲೈಂಗಿಕ ಹಗರಣವನ್ನು ಗೌಣ ಮಾಡಿ, ಅತ್ಯಾಚಾರದಂತಹ ಅಪರಾಧವನ್ನು ಹಾಸ್ಯದ ಸರಕಾಗಿ ಬದಲಾಯಿಸುತ್ತಿವೆ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ” ಎಂದು ಆರೋಪಿಸಿದರು.
“ಸಂತ್ರಸ್ತೆಯರನ್ನು ಲಘುವಾಗಿ ನೋಡುವುದಲ್ಲದೆ ಹಾಸನ ಜಿಲ್ಲೆಯ ಎಲ್ಲ ಮಹಿಳೆಯರ ಘನತೆಗೆ ಧಕ್ಕೆಯುಂಟು ಮಾಡುವಂತಿವೆ. ಇದು ಎಲ್ಲ ಸಂತ್ರಸ್ತ ಮಹಿಳೆಯರಿಗೆ ಹಾಗೂ ಕುಟುಂದವರಿಗೆ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಅಂತ್ರಸ್ತರು ಮುಂದೆ ಬಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಲು ಹಿಂಜರಿಯುವಂತೆ ಮಾಡಬಹುದು. ಇವುಗಳ ಹೊರತಾಗಿಯೂ ಅನೇಕ ಮೀಮ್ಸ್ ವಿಡಿಯೋಗಳು ಬಂದಿರುವ ಸಾಧ್ಯತೆ ಇದ್ದು ಅವುಗಳನ್ನು ಪತ್ತೆ ಮಾಡಬೇಕಿದೆ” ಎಂದು ಒತ್ತಾಯಿಸಿದರು.
“ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ, ಸಂತ್ರಸ್ತ ಮಹಿಳೆಯರಿಗೆ ಭೀತಿ ಹುಟ್ಟಿಸುವ, ಎಲ್ಲ ಮಹಿಳೆಯರ ಘನತೆಗೆ ಧಕ್ಕೆ ತರುವ, ಅತ್ಯಾಚಾರದಂತಹ ಅಪರಾಧವನ್ನು ಗೌಣವಾಗಿ ನೋಡುವ, ಈಗ ನಡೆಯುತ್ತಿರುವ ತನಿಖೆಯ ಗಹನತೆಯನ್ನು ಹಗುರವಾಗಿ ನೋಡುವಂತಹ ಈ ಮೀಮ್ಸ್ ವಿಡಿಯೋಗಳನ್ನು ತಯಾರಿಸಿದವರು ಮತ್ತು ಅವುಗಳನ್ನು ಪ್ರಸಾರ ಮಾಡುತ್ತಿರುವವರ ವಿರುದ್ದ ಐಪಿಸಿ, ಐಟಿ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು” ಎಂದು. ಆಗ್ರಹಿಸಿದರು.
“ಈ ರೀತಿಯ ಮೀಮ್ಸ್ ವಿಡಿಯೋಗಳನ್ನು ಮಾಡುವುದು ಮತ್ತು ಹಂಚಿಕೊಳ್ಳುವುದನ್ನು ತಡೆಯಲು ಕೂಡಲೇ ಮಾಧ್ಯಮಗಳ ಮೂಲಕ ಸಾರ್ವಜನಿಕ ಎಚ್ಚರಿಕೆ ನೀಡಬೇಕು” ಎಂದರು.
“ಈಗಾಗಲೇ ವಾಟ್ಸಾಪ್ ಮೂಲಕ ಹರಿದಾಡುತ್ತಿರುವ ಲೈಂಗಿಕ ದೌರ್ಜನ್ಯದ ಫೋಟೋ ಮತ್ತು ವಿಡಿಯೋಗಳು ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಯೂಟ್ಯೂಬ್, ಇನ್ಸ್‌ಟಾಗ್ರಾಂ, ವಾಟ್ಸಾಪ್ ಮತ್ತಿತರೆ ತಾಣಗಳಲ್ಲಿ ಪ್ರಸಾರವಾಗುತ್ತಿರುವ ಮಹಿಳೆಯರ ಘನತೆಯನ್ನು ಕುಗ್ಗಿಸುವ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುವ ವಿಡಿಯೋಗಳನ್ನು ಸೈಬರ್ ವಿಭಾಗ ಕೂಡಲೇ ವಶಪಡಿಸಿಕೊಂಡು, ಡಿಲಿಟ್ ಮಾಡಿ, ಕ್ರಮ ಕೈಗೊಳ್ಳಬೇಕು ಮತ್ತು ಹಂಚಿಕೆಯಾಗದಂತೆ ತಡೆಗಟ್ಟಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ಲೈಂಗಿಕ ಹಗರಣ | ಭವಾನಿ ರೇವಣ್ಣಗೂ ನೋಟಿಸ್ ನೀಡಿದ ಎಸ್‌ಐಟಿ
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಜಿಲ್ಲಾಧ್ಯಕ್ಷ ಎಂ ಜಿ ಪೃಥ್ವಿ, ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ವಿ ರಮೇಶ್ ಇದ್ದರು.
