ಚುನಾವಣೆ ಆಗುವವರೆಗೂ ರಾಜಕಾರಣ, ಚುನಾವಣೆ ಮುಗಿದ ಬಳಿಕ ಎಲ್ಲರನ್ನೂ ಸಮನಾಗಿ ನೋಡಿ ಕೆಲಸ ಮಾಡುವುದು ಜನಪ್ರತಿನಿಧಿಗಳ ಜವಬ್ದಾರಿ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಹಾಸನಕ್ಕೆ ಭಾನುವಾರ ಮೊದಲ ಬಾರಿಗೆ ಭೇಟಿ ನೀಡಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ʼಶಕ್ತಿ ಯೋಜನೆ’ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
“ಮಧುಗಿರಿ ಸಾಮಾನ್ಯ ಕ್ಷೇತ್ರ. ಅದರೆ, ನಾನು ಎಸ್‌ಟಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯಾದರೂ ನನ್ನನ್ನು 36 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ ಎಂದರೆ ಅಲ್ಲಿನ ಜನ ಜಾತ ನೋಡಿಲ್ಲ ಎಂದರ್ಥ. ಜೊತೆಗೆ ಹಣವನ್ನು ವ್ಯಯ ಮಾಡಿಲ್ಲ. ಏನೂ ಇಲ್ಲದೇ ಜನಪರವಾಗಿ ಕೆಲಸ ಮಾಡಿರುವ ಹಿನ್ನೆಲೆ ಪ್ರೀತಿ, ವಿಶ್ವಾಸದಿಂದ ನನಗೆ ಅವಕಾಶ ಕೊಟ್ಟಿದ್ದಾರೆ” ಎಂದರು.
“ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರದಲ್ಲಿರುವ ಎಲ್ಲರನ್ನು ಕುಟುಂಬದ ಸದಸ್ಯರೆಂದು ತಿಳಿದು ಅವರ ಕಷ್ಟ, ಸುಖಗಳಿಗೆ ಸ್ಪಂದಿಸುವುದು ನಮ್ಮ ಜವಬ್ದಾರಿ. ಅದೇ ರೀತಿ ಈ ಜಿಲ್ಲೆಯಲ್ಲೂ ಸೇವೆ ಮಾಡುತ್ತೇನೆ. ಹಾಸನ ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ಶಾಸಕರ ವಿಚಾರ ಜನಾಭಿಪ್ರಾಯ ಏನಿದೆ ಅದಕ್ಕೆ ನಾವೆಲ್ಲ ತಲೆಬಾಗಬೇಕು” ಎಂದು ಹೇಳಿದರು.
“ಹಾಸನ ಜಿಲ್ಲೆಯಲ್ಲಿ ಪ್ರಸ್ತುತ ಒಂದು ಸೀಟ್ ಇರೋದು ಏಳು ಸೀಟ್ ಆಗಬಹುದು. ಏಳು ಸೀಟ್ ಇರುವುದು ಸೊನ್ನೆ ಆಗಬಹುದು ಅದು ಬೇರೆ ವಿಚಾರ. ಆದರೂ ಕಾಂಗ್ರೆಸನ್ನು ಅತ್ಯಂತ ಬಲಶಾಲಿಯಾಗಿ ಮಾಡುವ ಪ್ರಯತ್ನ ನಿರಂತರವಾಗಿ ಇರುತ್ತೆ” ಎಂದು ತಿಳಿಸಿದರು.
ಶಾಸಕ ಎಚ್ ಪಿ ಸ್ವರೂಪ್ ಗೈರು
“ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಎಚ್ ಪಿ ಸ್ವರೂಪ್ ಏಕೆ ಬರಬಾರದು ಅಂತ ಕೇಳಿದ್ದೀನಿ ಅಷ್ಟೇ. ಅವರು ಬರಲಿಲ್ಲ ಅಂದರೆ ವಿರೋಧ ಅಂತಾ ಆರೋಪ ಮಾಡಿಲ್ಲ” ಎಂದರು.
“ಶಾಸಕರಾದ ಸಿ ಎನ್ ಬಾಲಕೃಷ್ಣ ಮತ್ತು ಕೆ ಎಂ ಶಿವಲಿಂಗೇಗೌಡ ಸಿಕ್ಕಿದ್ದರು. ನಾವು ನಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ಚಾಲನೆ ನೀಡಬೇಕು ಎಂದು ತೆರಳಿದರು. ಇವರೂ ಕೂಡ ಅದೇ ರೀತಿ ಬರ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಅವರು ಭಾಗವಹಿಸಲಿಲ್ಲ ಎಂದರೆ, ಅವರಿಗೆ ಈ ರೀತಿಯ ಜನಪರ ಕಾರ್ಯಕ್ರಮಗಳಿಗೆ ವಿರೋಧ ಇದ್ದಾರಾ ಅಂತ ಜನ ಏನಾದ್ರು ಭಾವಿಸಿದರೆ ಅದಕ್ಕೆ ನಾನು ಉತ್ತರ ಹೇಳಲು ಆಗುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ರಾಜಧಾನಿ ಸೇರಿ ವಿವಿಧ ಜಿಲ್ಲೆಗಳಲ್ಲಿ ʼಶಕ್ತಿ ಯೋಜನೆʼ ಜಾರಿಯ ಸಂಭ್ರಮ
ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ
“ಸರ್ಕಾರಿ ಕಾರ್ಯಕ್ರಮದಲ್ಲಿ ಏನು ಶಿಷ್ಟಾಚಾರ ಉಲ್ಲಂಘನೆ ಆಗಿದೆ. ನನಗೆ ಜಿಲ್ಲೆಯ ಯಾರ ಹೆಸರುಗಳೂ ಗೊತ್ತಿಲ್ಲ. ಯಾರೂ ಪರಿಚಯ ಇಲ್ಲ. ಯಾರ ಹೆಸರನ್ನು ಪ್ರಸ್ತಾಪವನ್ನು ಮಾಡಿಲ್ಲ. ಒಂದು ವೇಳೆ ಲೋಪ ಆಗಿದ್ದರೆ ಸಲಹೆ ನೀಡಿ. ಆ ಸಲಹೆಯಂತೆ ಮುನ್ನಡೆಯುತ್ತೇನೆ. ಈ ಜಿಲ್ಲೆಯಲ್ಲಿ ಒಳ್ಳೆಯ ಆಡಳಿತ ಕೊಡುವ ಕೆಲಸ ಮಾಡುತ್ತೇನೆ” ಎಂದು ಹೇಳಿದರು.