- ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ಶಾಸಕ
- ಘಟನಾ ಸ್ಥಳದಲ್ಲೇ ಮೃತದೇಹವಿಟ್ಟು ಪ್ರತಿಭಟನೆ ನಡೆಸುತ್ತಿದ್ದರು
ವಿದ್ಯುತ್ ತಂತಿ ತುಳಿದು ವೃದ್ಧೆ ಮತ್ತು ಹಸು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಹಿನ್ನಲೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಮ್ಮ ಅವರನ್ನು ಅಮಾನತು ಮಾಡಲಾಗಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ಗಂಗಮ್ಮ ಎಂಬುವವರು ಹಸು ಮೇಯಿಸಿಕೊಂಡು ಹಿಂತಿರುಗುತ್ತಿದ್ದಾಗ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕಾರಣ ಹಸು ಮತ್ತು ಗಂಗಮ್ಮ ಮೃತಪಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆ ರೈತ ಸಂಘ ಮತ್ತು ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
“ಹಿಂದೆಯೂ ಇದೇ ರೀತಿ ಘಟನೆ ನಡೆದಿದ್ದು, ವಿದ್ಯುತ್ ವಾಹಕವನ್ನು ಬದಲಾವಣೆ ಮಾಡುವ ಬಗ್ಗೆ ಒಂದು ವರ್ಷದಿಂದ ತಿಳಿಸಿದರೂ, ಕ್ಯಾಂಪ್ ಮಾರ್ಗದಾಳು, ಶಾಖಾಧಿಕಾರಿ, ಉಪವಿಭಾಗಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ರೈತ ಸಂಘದ ಮುಖಂಡ ಬಳ್ಳೂರು ಸ್ವಾಮಿಗೌಡ ಆರೋಪಿಸಿದ್ದಾರೆ.
ಶುಕ್ರವಾರ ಸಂಜೆಯಿಂದ ಘಟನಾ ಸ್ಥಳದಲ್ಲೇ ಮೃತದೇಹ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಕೂಡಲೇ ಎಇಇ ಅಮಾನತುಗೊಳಿಸಿ ಎಂದು ಪಟ್ಟು ಹಿಡಿದಿದ್ದರು. ಪ್ರತಿಭಟನಾಕಾರರ ಒತ್ತಾಯ ಪರಿಗಣಿಸಿ ಅಧಿಕಾರಿ ಚಂದ್ರಮ್ಮ ಅವರನ್ನು ಅಮಾನತು ಮಾಡಲಾಗಿದೆ.
ಪ್ರತಿಭಟನಾಕಾರರು ಎಇಇ ಚಂದ್ರಮ್ಮ ಅವರ ಅಮಾನತು ಆದೇಶದ ಬಳಿಕ ಮೃತದೇಹ ಮರಣೋತ್ತರ ಪರೀಕ್ಷೆಗೆ ಒಪ್ಪಿದರು.
ಈ ಸುದ್ದಿ ಓದಿದ್ದೀರಾ? ಜೈನ ಮುನಿ ಹತ್ಯೆ ಪ್ರಕರಣ | ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಡಿ ಕೆ ಶಿವಕುಮಾರ್ ಭರವಸೆ
5 ಲಕ್ಷ ರೂಪಾಯಿ ಪರಿಹಾರ
ಬೇಲೂರು ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ಅವರು ಮೃತರ ಕುಟುಂಬಕ್ಕೆ ಸೆಸ್ಕ್‌ನಿಂದ 5 ಲಕ್ಷ ರೂಪಾಯಿ ಪರಿಹಾರ ವಿತರಿಸಿದರು. ಮಾರ್ಗದಾಳುಗಳಿಗೂ ನೋಟಿಸ್ ನೀಡಲು ಸೆಸ್ಕ್ ಮುಖ್ಯ ಎಂಜಿನಿಯರ್ ಆದೇಶಿಸಿದ್ದಾರೆ.