ಕೌಟುಂಬಿಕ ಕಲಹದಿಂದ ಬೇಸತ್ತಿದ್ದು, ಹೇಮಾವತಿ ನದಿಗೆ ಹಾರಿ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಇಂದಿರಾನಗರದ ನಿವಾಸಿ ಪ್ರಮೋದ್(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪ್ರಮೋದ್ ಹಾಗೂ ಅವರ ಪತ್ನಿ ನಡುವೆ ಪದೇ ಪದೆ ಜಗಳವಾಗುತ್ತಿತ್ತು. ಆಕೆಯ ತಮ್ಮಂದಿರು ಅವರಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಮೋದ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಡಿಸೆಂಬರ್ 29ರ ಸಂಜೆ ಪ್ರಮೋದ್ ತನ್ನ ಮೊಬೈಲ್ ಮನೆಯಲ್ಲಿಯೇ ಬಿಟ್ಟು ತೆರಳಿದ್ದರು. ಪ್ರಮೋದ್‌ಗಾಗಿ ಪೋಷಕರು ಹುಡುಕಾಟ ನಡೆಸಿದ್ದು, ನಂತರ ಕೆ ಆರ್ ಪುರಂ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಅಂದು ರಾತ್ರಿ ಹೇಮಾವತಿ ನದಿಯ ಸೇತುವೆ ಬಳಿ ಪ್ರಮೋದ್ ಬೈಕ್ ಪತ್ತೆಯಾಗಿತ್ತು. ಅದನ್ನು ಕಂಡ ಸ್ಥಳೀಯರು ಪರಿಶೀಲನೆ ನಡೆಸಿದ ವೇಳೆ ಬೈಕ್‌ನಲ್ಲಿ ಬ್ಯಾಂಕ್‌ನ ಪಾಸ್‌ಬುಕ್‌ಗಳಲ್ಲಿ ಕಂಡ ಫೋನ್ ನಂಬರ್‌ಗೆ ಕರೆ ಮಾಡಿದ್ದರು. ಆ ವೇಳೆ ಪ್ರಮೋದ್ ತಂದೆ ಕರೆ ಸ್ವೀಕರಿಸಿದಾಗ ಸ್ಥಳೀಯರು, ನದಿಯ ಬಳಿ ದ್ವಿಚಕ್ರ ವಾಹನ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿದ್ದೀರಾ?ಹಾಸನ | ಹೊಸವರ್ಷದ ಸಂಭ್ರಮ; ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ
ಡಿಸೆಂಬರ್ 30ರಿಂದ ಹೇಮಾವತಿ ನದಿಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಬುಧವಾರ ಬೆಳಿಗ್ಗೆ ಪ್ರಮೋದ್ ಶವ ನದಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.