ಹಾಸನ ತಾಲೂಕಿನ ದುದ್ದ ಹೋಬಳಿಯ ಹಿರಿಕಡಲೂರು ಗ್ರಾಮದಲ್ಲಿ ಕೆಪಿಟಿಸಿಎಲ್ ವತಿಯಿಂದ ಪವರ್ ಕಂಬಗಳನ್ನು ಹಾಕುವ ಕಾಮಗಾರಿ ನಡೆಸಿದ್ದು, ಸಂತ್ರಸ್ತ ಬಡ ರೈತರಿಗೆ ಸೂಕ್ತ ಪರಿಹಾರ ನೀಡದೆ ಇದೀಗ ಬಿತ್ತನೆ ಬೆಳೆಯ ಮೇಲೇಯೇ ವಿದ್ಯುತ್ ತಂತಿಗಳನ್ನು ಅಳವಡಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಿಯ ಯುವ ರೈತ ರಂಗಸ್ವಾಮಿ ಎಂಬುವವರು ಇದನ್ನು ತೀವ್ರವಾಗಿ ಖಂಡಿಸಿದ್ದು, ಸೂಕ್ತ ಪರಿಹಾರ ನೀಡದೆ ಕಾಮಗಾರಿ ಆರಂಭಿಸಿದರೆ ವಿಷ ಸೇವಿಸಿ ಪ್ರಾಣ ತ್ಯಾಗ ಮಾಡಲಾಗುವುದು ಎಂದು ಮರವನ್ನೇರಿ ಕುಳಿತಿದ್ದರು.
“ಈ ಬಗ್ಗೆ ಡಿಸಿಯವರಿಗೆ ಮನವಿ ನೀಡಿದರೂ ಕೂಡ ನಮ್ಮ ಮಾತಿಗೆ ಕಿಮ್ಮತ್ತು ಬೆಲೆ ನೀಡದ ಅಧಿಕಾರಿಗಳು ಏಕಾಏಕಿ ಕೆಲಸ ಮಾಡುವಂತೆ ಆದೇಶ ನೀಡಿದ್ದಾರೆ. ನಾವು ಅವರಲ್ಲಿ ಮನವಿ ಮಾಡಿದಾಗ, ನಿಮಗೆ ಸೂಕ್ತ ಪರಿಹಾರ ಒದಗಿಸಿ ಬಳಿಕ ಕೆಲಸ ಆರಂಭಿಸುತ್ತೇವೆಂದು ಹುಸಿ ಭರವಸೆ ನೀಡಿದ್ದರು. ಇದೀಗ ಯಾವುದೇ ರೀತಿಯ ಪರಿಹಾರ ಒದಗಿಸದೆ ಲೈನ್ ಎಳೆಯಲು ಮುಂದಾಗಿದ್ದಾರೆ” ಎಂದು ಆರೋಪಿಸಿದರು.
ಈ ಕುರಿತು ಯುವರೈತ ರಂಗಸ್ವಾಮಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ದಲಿತರಾಗಿದ್ದು, 10 ಗುಂಟೆ 20 ಗುಂಟೆ ಜಮೀನು ಇಟ್ಟುಕೊಂಡು ಬದುಕುತ್ತಿದ್ದೇವೆ. ಏನೋ ಅನುಕೂಲಕ್ಕೆ ತಕ್ಕಂತೆ 10-15 ತೆಂಗಿನ ಸಿಸಿಗಳನ್ನು ಬೆಳೆದುಕೊಂಡಿದ್ದೇವೆ. ಲೈನ್ ಎಳೆಯುವ ನೆಪದಲ್ಲಿ ಫಲಭರಿತ ಮರಗಳನ್ನು ಕಡಿದರೆ ನಮ್ಮ ಮುಂದಿನ ಪಾಡೇನು? ಈ ಕಂಬ ನೆಡಲು ಜಾಗ ಕೊಟ್ಟು ಬೆಳೆ ಕಳೆದುಕೊಂಡಿದ್ದೇವೆ. ಈಗ ಲೈನ್ ಎಳೆಯಲು ಬಂದು ಮತ್ತೊಮ್ಮೆ ಬೆಳೆ ನಾಶ ಮಾಡುತ್ತಿದ್ದಾರೆ. ಅಲ್ಲದೆ ಫಸಲು ಬಿಡುವ ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯಲು ಆಗುವುದಿಲ್ಲ. ಹಾಗಾಗಿ ಮೊದಲು ನಮಗೆ ಪರಿಹಾರ ನೀಡಿ, ಬಳಿಕ ಕಾಮಗಾರಿ ಆರಂಭಿಸಿ” ಎಂದು ಪಟ್ಟು ಹಿಡಿದಿದ್ದಾರೆ.
“ನಮಗೆ ಸರಿಯಾದ ಪರಿಹಾರ ನೀಡದೆ ಕಾಮಗಾರಿ ಶುರು ಮಾಡಲು ಬಿಡುವುದಿಲ್ಲ, ಬೇಕಾದರೆ ಇಲ್ಲೇ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳುವುದಕ್ಕೂ ಸಿದ್ದವಾಗಿದ್ದೇವೆಂದು ಹೇಳಿದರೆ ದುದ್ದ ಎಸ್‌ಐ, ʼನೀವು ಸತ್ತರೆ ಯಾರಿಗೂ ನಷ್ಟವಿಲ್ಲ, ನೀವು ಸತ್ತರೆ ನಿಮ್ಮ ಹೆಣದ ಮೇಲಾದರೂ ಸರಿ ನಾವು ಕಾಮಗಾರಿ ನಡೆಸುತ್ತೇವೆ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿʼರೆಂದು ಉದ್ಧಟತನದ ಮಾತುಗಳನ್ನಾಡಿದ್ದಾರೆ” ಎಂದು ಆರೋಪಿಸಿದರು.

“ನಾವು ಕೆಲಸಕ್ಕೆ ಅಡ್ಡಿ ಮಾಡುವುದಿಲ್ಲ, ನಮಗೆ ಬರಬೇಕಾದ ಪರಿಹಾರ ನೀಡಿ, ನಂತರ ಕಾಮಗಾರಿ ಕೈಗೊಳ್ಳಿ ಅಂತ ಈ ಹಿಂದಿನಿಂದಲೂ ಹೇಳಿಕೊಂಡೇ ಬಂದಿದ್ದೇವೆ. ಯಾಕಂದರೆ ಇದೇ ಹಿರಿಕಡಲೂರು ಗ್ರಾಮದವರ ಸೋಮನಹಳ್ಳಿಯ ಜಮೀನನ್ನು 66 ಎಂಯುಎಸ್‌ಎಸ್‌ಗೆ ಪಡೆದಿರುವುದರ ಪರಿಹಾರವನ್ನೇ ಈವರೆಗೆ ನೀಡಿಲ್ಲ. ಹಾಗಾಗಿ ನಾವು ಈಗ ಮೊದಲು ಪರಿಹಾರ ಕೊಡಿ ಅಂತ ಪಟ್ಟುಹಿಡಿದಿದ್ದೇವೆ. ಯಾಕಂದರೆ ಮುಂದಿನ ದಿನಗಳಲ್ಲಿ ನಾವು ಕೆಲಸ ಕಾರ್ಯಗಳನ್ನು ಬಿಟ್ಟು, ಅಧಿಕಾರಿಗಳ ಮುಂದೆ ಹೋಗಿ ನಿಲ್ಲಲಾಗುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಜೀವನಕ್ಕೆ 10-15 ತೆಂಗಿನ ಮರಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ಮರಗಳನ್ನು ಕಡಿದು ಬಿಸಾಕಿದರೆ ನಮ್ಮ ಮುಂದಿನ ಗತಿಯೇನು? ಇಂತಹ ಸ್ಥಿಯಲ್ಲಿ ನಾವು ಬದುಕುತ್ತಿದ್ದರೂ ಕೂಡ ಯಾವುದೇ ಅಧಿಕಾರಿಗಳಾಗಲಿ, ಎಂಎಲ್‌ಎ ಆಗಲಿ ನಮ್ಮ ನೆರವಿಗೆ ಧಾವಿಸದಿರುವುದು ಖಂಡನೀಯ. ನಮಗೆ ಸೂಕ್ತ ಪರಿಹಾರ ನೀಡದಿದ್ದಲ್ಲಿ ನಮಗೆ ಸಾವೇ ಗತಿಯಾಗಿದೆ. ಈ ಕುರಿತು ನಾವು ಎಂಪಿ, ಎಂಎಲ್‌ಎ, ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹೀಗಿರುವಾಗ ನಮ್ಮ ಸಂಕಟವನ್ನು ಆಲಿಸುವವರು ಯಾರಿದ್ದಾರೆ, ಯಾರ ಬಳಿಯೂ ನಮ್ಮ ತೊಳಲಾಟವನ್ನು ಹೇಳಿಕೊಳ್ಳದಂತಾಗಿದೆ” ಎಂದು ಅವಲತ್ತುಕೊಂಡರು.
“2024ರಲ್ಲಿ ಅರಸೀಕೆರೆಯ ಬೆಳಗುಂಬದಲ್ಲಿ 1:4ರಂತೆ(ಗುಂಟೆಗೆ 4 ಸಾವಿರ ರೂ.) ಪರಿಹಾರ ನೀಡಿದ್ದಾರೆ. ಆದರೆ ನಮಗೆ ಮಾತ್ರ 1:3ಯಂತೆ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ನಾವು ಬೆಳಗುಂಬದಲ್ಲಿ ನೀಡಿರುವ ಪ್ರಕಾರವೇ ಪರಿಹಾರ ನೀಡಿ ಅಂತ ಕೇಳಿಕೊಳ್ಳುತ್ತಿದ್ದೇವೆ. ನಮ್ಮ ಅಕ್ಕ ಪಕ್ಕದ ಗ್ರಾಮಗಳಲ್ಲಿ ನೀಡಿರುವಂತಹ ಪರಿಹಾರ ನೀಡಿ ಅಂತ ಕೇಳುತ್ತಿದ್ದೇವೆ” ಎಂದರು.

“ಬಡವರಾದ ನಮ್ಮಗಳ ಮೇಲೆಯೇ ಯಾಕೆ ದೌರ್ಜನ್ಯ ಮಾಡುತ್ತಾರೆ. ಅಧಿಕಾರಿಗಳು ರೌಡಿಗಳೇ, ಪೊಲೀಸರ ಸಮ್ಮುಖದಲ್ಲಿ ಪೊಲೀಸ್ ವ್ಯಾನ್ ಬಂದು ನಿಂತುಕೊಂಡು ಕೆಲಸ ಮಾಡುವ ಅಗತ್ಯವಿರಲಿಲ್ಲ. ನಮ್ಮ ಪರಿಹಾರವನ್ನು ನಮಗೆ ನೀಡಿದ್ದರೆ ನಾವು ಯಾವುದೇ ಕಾರಣಕ್ಕೂ ಅಡ್ಡಿಪಡಿಸುತ್ತಿರಲಿಲ್ಲ. ನಾವು ಡಿಸಿಗೆ ಹೇಳಿಬಂದರೂ ಕೂಡ ಈ ರೀತಿಯ ದುಂದಾವರ್ತನೆ ಮಾಡುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈಗ ತಾನೆ ಬಿತ್ತನೆ ಮಾಡಿದ್ದೇವೆ, ಇಂದಿನ ಬಿತ್ತನೆ ಬೀಜ, ಗೊಬ್ಬರ, ಉಳುಮೆಗೆ ನೀಡುವ ಕೂಲಿಯ ಬೆಲೆಯಂತೂ ಗಗನಕ್ಕೇರಿದೆ. ಹೀಗಿರುವಾಗ ಈಗಷ್ಟೇ ಮೂಡಿರುವ ಬೆಳೆ ನಾಶವಾಗುವುದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಹೊಟ್ಟೆಯ ಕರುಳು ಬಗೆದಂತಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳಾಗಲೀ, ಕ್ಷೇತ್ರದ ಜನಪ್ರತಿನಿಧಿಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲೀ ಯಾರೂ ಕೂಡ ಈವರೆಗೆ ನಮ್ಮ ನೆರವಿಗೆ ಬಾರದಿರುವುದು ದುರಂತವೇ ಸರಿ. ಹೀಗಾದರೆ ನಾವು ಯಾರ ಬೆಂಬಲ ಪಡೆಯಬೇಕು. ಇತ್ತ ಪೊಲೀಸರು ಗೂಂಡಾಗಳಂತೆ ವರ್ತಿಸುತ್ತಾರೆ. ಜಿಲ್ಲಾಧಿಕಾರಿಗಳು ಸುಳ್ಳಿನ ಭರವಸೆ ನೀಡುತ್ತಾರೆ. ಹೀಗಿರುವಾಗ ನಾವು ಯಾರ ಬಳಿ ಹೋಗಿ ನಮ್ಮ ಅಳಲು ತೋಡಿಕೊಳ್ಳಬೇಕು ಎಂಬುದೇ ತಿಳಿಯದಾಗಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

“ಕಾರಿಡಾರ್ ನಿರ್ಮಾಣಕ್ಕೆ 17.5 ಅಡಿ ಜಾಗ ಹೋಗುವುದಾಗಿ ಹೇಳಿದ್ದರು. ಈಗ 35 ಅಡಿಯಷ್ಟು ಜಾಗ ಕಬಳಿಕೆ ಆಗಿದೆ.
ಹಾಗಾಗಿ ಮರಗಳಿಗೆ, ಬೆಳೆನಾಶ ಹಾಗೂ ಅಧಿಕ ಜಾಗದ ಒತ್ತುವರಿ ಸೇರಿದಂತೆ ಎಲ್ಲದಕ್ಕೂ ಒಟ್ಟಿಗೇ ಪರಿಹಾರ ನೀಡಬೇಕು. ಎಲ್ಲೋ ಕೂತು ಸ್ಕೆಚ್ ಮಾಡಿ ಕಾಮಗಾರಿ ಮಾಡೋಕೆ ಆಗುತ್ತೆ, ಆದರೆ ರೈತರಿಗೆ ಅನುದಾನ ಕೊಡೋಕೆ ಆಗಲ್ವಾ. ಕೆಲಸ ಮಾಡೋದಕ್ಕೆ ಸರ್ಕಾರದಿಂದ ಆದೇಶ ಆಗಿದೆ ಅಂತರೆ. ಆದರೆ ರೈತರಿಗೆ ಪರಿಹಾರ ನೀಡುವುದಕ್ಕೆ ಸರ್ಕಾರ ಆದೇಶ ನೀಡಿಲ್ವ. ರೈತರ ಹೊಟ್ಟೆ ಮೇಲೆ ಹೊಡೆದು ಸರ್ಕಾರ ಯಾವ ಅಭಿವೃದ್ಧಿ ಮಾಡಲು ಹೊರಟಿದೆ” ಎಂದು ಕಿಡಿಕಾರಿದರು.
“ಸರ್ಕಾರ, ಸರ್ಕಾರ ಅಂತರೆ, ಹಾಗಾದರೆ ಸರ್ಕಾರ ರಚನೆ ಮಾಡೋಕೆ ಪ್ರಮುಖರು ಯಾರು? ಹಾಗಾದರೆ ಈ ನೆಲದಲ್ಲಿ ನಮ್ಮಗಳ ಅಸ್ತಿತ್ವ ಏನು? ವಿಷ ಕುಡಿತೀವಿ ಅಂದರೂ ಕೂಡ ನಿಮ್ಮ ಹೆಣದ ಮೇಲೆ ಕಾಮಗಾರಿ ಮಾಡ್ತೀವಿ ಎನ್ನುವ ಇಂತಹ ದುಷ್ಟ, ರೈತ ವಿರೋಧಿ ಸರ್ಕಾರ ಇನ್ಯಾರಿಗಾಗಿ ಅಭಿವೃದ್ಧಿ ಕಾರ್ಯ ಮಾಡಲು ಹೊರಟಿದೆ ಎಂಬುದನ್ನು ತಿಳಿಸಬೇಕು” ಎಂದು ಆಗ್ರಹಿಸಿದರು.
“ಇದೀಗ ನಮ್ಮ ಹೆಣದ ಮೇಲಾದರೂ ಸರಿ ಕಾಮಗಾರಿ ನಡೆಸುತ್ತೇವೆ ಅಂತ ಕಾಮಗಾರಿ ಕೈಗೊಂಡಿದ್ದಾರೆ. ಅದೇ ರೀತಿ ಸೂಕ್ತ ಸಮಯಕ್ಕೆ ನಮಗೆ ಸಮರ್ಪಕ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ಕೈಗೊಳ್ಳಲಾಗುವುದು. ಅಲ್ಲದೇ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ” ಎಂದು ಎಚ್ಚರಿಕೆ ನೀಡಿದರು.

“ಪೊಲೀಸ್ ನೇತೃತ್ವದಲ್ಲಿ ಕೆಲಸ ಆರಂಭಿಸಿದ್ದಾರೆ. ರೈತರೆಂದರೆ ರೌಡಿಗಳಾ?, ನಮ್ಮ ಹಕ್ಕುಗಳನ್ನು ಕೇಳುವ ಅಧಿಕಾರ ನಮಗೆ ಇಲ್ಲವಾ? ನಮ್ಮಗಳ ಮೇಲೆಯೇ ದಬ್ಬಾಳಿಕೆ ನಡೆಸಿ, ಸರ್ಕಾರ ಕಾರ್ಯ ಯೋಜನೆಗೆ ಮುಂದಾಗುವುದು ತರವಲ್ಲ. ಪೊಲೀಸರು ಸಾಮಾನ್ಯ ಜನರ ಮೇಲೆ ಗೂಂಡಾಗಿರಿ ಮಾಡುತ್ತ ಸರ್ಕಾರದ ಕೆಲಸಕ್ಕೆ ರಕ್ಷಣೆ ನೀಡಲು ಮುಂದಾಗಿದ್ದಾರೆ. ರೈತ, ಕಾರ್ಮಿಕರ ತೆರಿಗೆ ಹಣದಿಂದ ಸಂಬಳ ಪಡೆಯುವ ಪೊಲೀಸ್ ಅಧಿಕಾರಿಗಳೇ ದರ್ಪ ತೋರಿದರೆ ವರ್ಷಪೂರ್ತಿ ಮಳೆ ಬಿಸಿಲೆನ್ನದೆ ದುಡಿಯುವ ರೈತರ ಸ್ವಾಭಿಮಾನ ಏನಾಗುತ್ತದೆ” ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿದ್ದೀರಾ? ಕೆ ಆರ್ ಪೇಟೆ | ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿಗಿಳಿದ ಕರ್ನಾಟಕ ಪಬ್ಲಿಕ್ ಶಾಲೆ; ಉಲ್ಲಂಘನೆಯಾಯಿತೇ ಶಿಕ್ಷಣದ ಹಕ್ಕು?
ಪ್ರತಿಭಟನೆಯ ಸ್ಥಳಕ್ಕೆ ಅಪರ ಜಿಲ್ಲಾಧಿಕಾಗಳು ಆಗಮಿಸಿದ್ದು “ದಯವಿಟ್ಟು ನಿಮ್ಮ ಪ್ರತಿಭಟನೆಯನ್ನು ನಿಲ್ಲಿಸಿ, ಜಮೀನಿನ ರೇಟ್ ಹೆಚ್ಚಿಗೆ ಮಾಡಲು ಆಗುವುದಿಲ್ಲ. ಆದರೆ ಬೆಳೆಹಾನಿ ಪರಿಹಾರ ನೀಡಬಹುದು. telegraph Act ಅಡಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ನಾವು ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಭೂಮಿ ಒತ್ತುವರಿ ಕಾಯಿದೆ ಅಡಿ ಏನಾದರೂ ಪ್ರಯತ್ನಿಸಬಹುದಿತ್ತು. ಆದರೆ ಈಗ ನಾವೂ ಕೂಡ ಏನೂ ಮಾಡಲು ಆಗುವುದಿಲ್ಲ. ಇದೀಗ ಬೆಳೆಹಾನಿ ಪರಿಹಾರ, ಮರಗಳ ಹಾನಿ ಪರಿಹಾರ ಎಲ್ಲವನ್ನೂ ಕೊಡಲಾಗುವುದು” ಎಂದು ಭರವಸೆ ನೀಡಿದ ಬಳಿಕ ಯುವರೈತ ರಂಗಸ್ವಾಮಿಯವರು ಮರದಿಂದ ಕೆಳಗೆ ಇಳಿದಿದ್ದು, ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ.