ಗೌರಿ ಕೊಲೆ ಹಂತಕರಿಗೆ ಸನ್ಮಾನ ಮಾಡಿರುವುದು ಬಹಿರಂಗ ಪ್ರಚೋದನೆ ನೀಡಿದಂತಾಗಿದ್ದು, ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಉತ್ತೇಜನ ನೀಡಿದಂತಾಗಿದೆ ಎಂದು ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಕಳವಳ ವ್ಯಕ್ತಪಡಿಸಿದರು.
ಗೌರಿ ಲಂಕೇಶ್ ಹಂತಕರ ಸನ್ಮಾನದ ವಿರುದ್ಧ ಹಾಸನ ನಗರದಲ್ಲಿ ನಾಗರಿಕರು ಪ್ರತಿರೋಧ ವ್ಯಕ್ತಪಡಿಸಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ಪರವಾಗಿ ಜಿಲ್ಲಾಧಿಕಾರಿ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವುದನ್ನು ಗುಜರಾತ್, ಉತ್ತರ ಪ್ರದೇಶಗಳಲ್ಲಿ ಕಂಡಿದ್ದೆವು. ಎಂತಹ ಸ್ಥಿತಿಗೆ ಈ ರಾಜ್ಯಗಳು ತಲುಪಿದವಲ್ಲಾ ಎಂದು ಮರುಗಿದ್ದೆವು. ಈ ರೀತಿಯಲ್ಲಿ ಅಪರಾಧಿಗಳನ್ನು ಸನ್ಮಾನಿಸಿ ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡುವುದನ್ನು ನಾವು ಪ್ರತಿಭಟಿಸಿದ್ದೆವು. ಆದರೆ ನಮ್ಮದೇ ರಾಜ್ಯದಲ್ಲಿ, ಕರ್ನಾಟಕದ ಹೆಮ್ಮೆಯ ದನಿ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನಿಸಿರುವುದನ್ನು ಕಂಡು ನಾವು ದಂಗಾಗಿದ್ದೇವೆ. ಇದು ಕರ್ನಾಟಕದ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಆದ ದೊಡ್ಡ ಕಳಂಕವೆಂದು ನಾವು ಭಾವಿಸುತ್ತೇವೆ. ಈ ನಡುವೆ ಏನೂ ಆಗಿಲ್ಲವೆಂಬಂತೆ ಗೃಹಇಲಾಖೆ ಇರುವುದನ್ನು ಕಂಡು ಮನಸ್ಸಿಗೆ ಬಹಳ ಬೇಸರವೂ ಆಗಿದೆ” ಎಂದರು.

“ಕೋಮುಸೌಹಾರ್ದತೆ ಹಾಗೂ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಗೌರಿ ಲಂಕೇಶ್ ಹಾಗೂ ಡಾ. ಎಂ ಎಂ ಕಲಬುರಗಿಯವರ ಕೊಲೆಗಡುಕ ಆರೋಪಿಗಳು ಬಿಡುಗಡೆಯಾದ ಸಂದರ್ಭದಲ್ಲಿಯೂ ಹಿಂದು ಮತಾಂಧ ಶಕ್ತಿಗಳು ಇಂತಹ ದುಷ್ಕೃತ್ಯ ನಡೆಸಿವೆ. ಈ ಹಿಂದೆ ಗುಜರಾತಿನ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆ ಕುಟುಂಬದ ಸದಸ್ಯರನ್ನು ಕೊಲೆಗೈದ ಅಪರಾಧಿಗಳು ಬಿಡುಗೊಂಡಾಗ ಹಿಂದುತ್ವ ಕೋಮುವಾದಿ ಶಕ್ತಿಗಳು ಅಂತಹ ಅಪರಾಧಿಗಳ ಪರ ನಿಂತು ಅಪರಾಧಿ ದುಷ್ಕೃತ್ಯ ಬೆಂಬಲಿಸಿದ್ದಿದೆ” ಎಂದರು.
“ಇಂತಹ ಸಮಾಜಘಾತುಕ ಶಕ್ತಿಗಳು ನಾಚಿಕೆಯಿಲ್ಲದೆ ತಮ್ಮ ದುಷ್ಕೃತ್ಯ ಮುಂದುವರೆಸಲು ನೈತಿಕ ಶಕ್ತಿ ಒದಗಿಸುವ ಮೂಲಕ ಸಮಾಜದ ಶಾಂತಿ ಸೌಹಾರ್ದತೆಗೆ ಗಂಡಾಂತರವಾಗಿ ಪರಿಣಮಿಸಲಿದೆ. ದುಡಿಯುವ ಜನರು, ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯಕ್ಕೆ ಇಂಬು ನೀಡಲಿದೆ. ಆದ್ದರಿಂದ, ಇಂತಹ ವೈಭವೀಕರಣದ ನಿಗ್ರಹಕ್ಕೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗೆ ಅಗತ್ಯ. ಕಾನೂನು ರೂಪಿಸಲು ಮತ್ತು ಕಾನೂನು ಕ್ರಮಕ್ಕೆ ಮುಂದಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ನಾವು ಆಗ್ರಹಿಸುತ್ತಿದ್ದೇವೆ. ಎಲ್ಲ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಸೌಹಾರ್ದತೆಗಾಗಿ ಕಾರ್ಯ ನಿರ್ವಹಿಸುವ ಶಕ್ತಿಗಳು ಈ ದಿಕ್ಕಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

“ಕೊಲೆಪಾತಕರಿಗೆ ಮಾಡಿರುವ ಸನ್ಮಾನ, ಕೊಲೆಗೆ ನೀಡಿರುವ ಪ್ರಚೋದನೆಯಾಗಿದೆ. ಹಿಂಸೆಗೆ ಒದಗಿಸಿರುವ ಸಾಮಾಜಿಕ ಮನ್ನಣೆಯಾಗಿದೆ. ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರೂ ಈ ಪ್ರಚೋದನಕಾರಿ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಹೈಕೋರ್ಟ್ ತೀರ್ಪು ಉಲ್ಲಂಘಿಸಿ ವೃದ್ಧ ದಂಪತಿಗೆ ವಂಚನೆ: ವಕೀಲ ವೆಂಕಟೇಶ್ ಆರೋಪ
“ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಬೇಕು. ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು. ಗೌರಿ ಲಂಕೇಶ್ ಕೊಲೆ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಹಿರಿಯ ದಲಿತ ಮುಂಖಂಡರಾದ ಎಚ್ ಕೆ ಸಂದೇಶ್, ಹುಲಿಕಲ್ ರಾಜಶೇಖರ್, ಕದಸಂಸ ರಾಜ್ಯ ಸಂಚಾಲಕ ಎಂ ಸೋಮಶೇಖರ್, ಸಾಮಾಜಿಕ ಕಾರ್ಯಕರ್ತ ಇರ್ಷಾದ್ ಅಹಮದ್ ದೇಸಾಯಿ, ದಸಂಸ ಅಂಬೇಡ್ಕರ್‌ವಾದದ ಈರೇಶ್ ಹಿರೇಹಳ್ಳಿ, ಅಂಬುಗ ಮಲ್ಲೇಶ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ ಜಿ ಪೃಥ್ವಿ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇದ್ದರು.