ಪಿಡಿಒ ರಘುನಾಥ್ ಅವರನ್ನು ಕೂಡಲೇ ಸೇವೆಯಿಂದ ವಜಾಮಾಡುವಂತೆ ಬೇಲೂರು ತಾಲೂಕಿನ ಗೋಣಿಸೋಮನಹಳ್ಳಿಯ ಸಂತ್ರಸ್ತ ಕುಟುಂಬಸ್ಥರು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗೋಣಿಸೋಮನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, “ಗ್ರಾಮಠಾಣಾ ಜಾಗಕ್ಕೆ ಸೇರಿದ ಸುಮಾರು 12 ಅಡಿ ಜಾಗದಲ್ಲಿ ರಸ್ತೆಗೆ ಜಾಗ ಬಿಡಿಸಿಕೊಡುವಂತೆ ಬೇಲೂರು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಮೌಖಿಕವಾಗಿ ಸ್ಥಳದಲ್ಲಿ ಪಿಡಿಒ ರಘುನಾಥ್ ಅವರಿಗೆ ಆದೇಶ ನೀಡಿದರೂ ರಸ್ತೆ ಬಿಡಿಸಿಕೊಡುವಲ್ಲಿ ವಿಫಲರಾಗಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ಅನಾಧಿಕಾಲದಿಂದಲೂ ಮನೆಕಟ್ಟಿಕೊಂಡು 12 ಅಡಿ ಖಾಲಿ ನಿವೇಶನದಲ್ಲಿ ತಿರುಗಾಡಿಕೊಂಡು ಬಂದಿದ್ದೇವೆ. ಆದರೆ ನಮ್ಮ ಗ್ರಾಮದ ಮೊಗಣ್ಣೆಗೌಡ ಮತ್ತು ಇತರರು ಈ ಜಾಗದಲ್ಲಿ ನಮ್ಮ ಕುಟುಂಬಕ್ಕೆ ತಿರುಗಾಡದಂತೆ ತೊಂದರೆ ಕೊಡುತ್ತಿದ್ದಾರೆ. ಅನೇಕ ಬಾರಿ ಪಿಡಿಒ ಅವರಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ” ಎಂದು ಗ್ರಾಮದ ಜಯಕುಮಾರ್ ಆಕ್ರೋಶಾ ವ್ಯಕ್ತಪಡಿಸಿದರು.
“ನಮ್ಮ ಮನೆಯ ಹೆಣ್ಣುಮಕ್ಕಳು, ವೃದ್ಧರು, ದವಸ ಧಾನ್ಯ, ನೀರು ತರಲು ತುಂಬಾ ತೊಂದರೆಯಾಗುತ್ತಿದೆ. ಪಿಡಿಒ ರಘುನಾಥ್ ಅವರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಸಚಿವ ರಾಜಣ್ಣ ವಿರುದ್ಧ ಅವಹೇಳನ; ವಕೀಲ ದೇವರಾಜೇಗೌಡ ಮಾತಿಗೆ ಕಾಂಗ್ರೆಸ್ ಮುಖಂಡರ ಖಂಡನೆ
“ನಮ್ಮ ಕಷ್ಟವನ್ನು ಮನಗಂಡು ಜಿಲ್ಲಾಧಿಕಾರಿಗಳು ನ್ಯಾಯ ಕೊಡಿಸಬೇಕು” ಎಂದಿ ಮನವಿ ಮಾಡಿದರು.
ಈ ವೇಳೆ ನೊಂದ ಕುಟುಂಬಸ್ಥರು, ಗ್ರಾಮ ಮುಖಂಡರು ಇದ್ದರು.
