ಹಾಸನ ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗಿದೆ. ಬಿರು ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ರೈತರ ಮುಖದಲ್ಲಿ ಇದೀಗ ಸಂತಸ ಮನೆ ಮಾಡಿದೆ.
ಯಸಳೂರು, ಹೆತ್ತೂರು ಹೋಬಳಿ ವ್ಯಾಪ್ತಿಯ ಹೊಂಗಡಹಳ್ಳ, ಮೊಕನಮನೆ, ಜೇಡಿಗದ್ದೆ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಮಳೆಯಾಗಿರುವ ಭಾಗಗಳಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ವಳಲಹಳ್ಳಿ, ಹಡ್ಲಹಳ್ಳಿ, ಹಿರದನಹಳ್ಳಿ, ಕರಡಿಗಾಲ ಹಾಗೂ ಜೇಡಿಗದ್ದೆ ಗ್ರಾಮಗಳಲ್ಲಿ 2.5 ಸೆಂ.ಮೀ ಮಳೆಯಾಗಿದೆ. ಐಗೂರು, ಚಿಕ್ಕಕುಂದೂರು, ಹಳ್ಳಿಗದ್ದೆ, ಉಚ್ಚಂಗಿ, ಮಲಗಳ್ಳಿ, ಹುಲಗತ್ತೂರು, ಪಾಲಹಳ್ಳಿ, ಕರಗೂರು ಸೇರಿ ಇತರ ಸುತ್ತ ಮುತ್ತಲ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ.
ಕಾಫಿ ತೋಟಗಳಿಗೆ ನೀರಿಲ್ಲದೆ, ನೀರು ಹಾಯಿಸಲು ಕಷ್ಟಪಡುತ್ತಿದ್ದ ಕಾಫಿ ಬೆಳೆಗಾರರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಕೆಲ ದಿನ ಇದೇ ರೀತಿ ಮಳೆ ಬಂದರೆ ಭೂಮಿ ತಂಪಾಗುವುದರ ಜೊತೆಗೆ ಜಾನುವಾರುಗಳಿಗೆ ಅನುಕೂಲವಾಗಲಿದೆ.
