ಹಾಸನದ ಸಕಲೇಶಪುರ ತಾಲೂಕಿನ ಕಡಗರವಳ್ಳಿ, ಆಲುವಳಿ ಗ್ರಾಮದಲ್ಲಿ ಭಾರಿ ಮಳೆಗೆ ಮರಗಳ ಸಮೇತ ಗುಡ್ಡ ಕುಸಿತ ಉಂಟಾಗಿದೆ. ಗುಡ್ಡ ಪ್ರದೇಶದಲ್ಲಿರುವ ಮನೆಗಳು ಸಹ ಕುಸಿಯುವ ಹಂತದಲ್ಲಿವೆ. ಅಲ್ಲಿಯ ನಿವಾಸಿಗಳು ಜೀವಭಯದಲ್ಲಿ ಜೀವನ ಸಾಗಿಸುವಂತಾಗಿದ್ದು, ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಗಳಿಗೆ ಕಾರಣವೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಡಗರವಳ್ಳಿ, ಆಲುವಳಿ ಗ್ರಾಮ ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿಯ ನಿವಾಸಿಗಳು ದಶಕಗಳಿಂದ ಸ್ಥಳೀಯ ಜನಪ್ರತಿನಿಧಿಗಳ ದಿವ್ಯನಿರ್ಲಕ್ಷ್ಯದಿಂದ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳ ನಡುವೆ ಜೀವನ ಸಾಗಿಸುವಂತಾಗಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಗ್ರಾಮದಲ್ಲಿ ಮರಗಳ ಸಮೇತ ಗುಡ್ಡ ಕುಸಿತ ಉಂಟಾಗಿದೆ. ಕಡಗರವಳ್ಳಿ-ಕಾಗೆನೆರೆ ರಸ್ತೆ ಸಂಪರ್ಕ ಬಂದ್ ಆಗಿದೆ. ವಾಹನ ಸವಾರರು ಹಾಗೂ ಗ್ರಾಮಸ್ಥರು ಸಂಚರಿಸಲು ಪರದಾಡುವಂತಾಗಿದೆ.
ಈ ಭಾಗದ ಕೆಲ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಗುಡ್ಡದಿಂದ ಬರುವ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವ ಪರಿಣಾಮ ಅವಘಡಗಳು ಹೆಚ್ಚಾಗುತ್ತಿವೆ ಎಂಬುವುದು ಗ್ರಾಮಸ್ಥರ ಗಂಭೀರ ಆರೋಪ. ಶಾಸಕರಿಗೆ ಗುಡ್ಡ ಕುಸಿತವಾಗಿರುವ ಬಗ್ಗೆ ಮಾಹಿತಿ ನೀಡಿದರೆ ಬಂದು ತಾ.ಪಂಗೆ ಅರ್ಜಿ ನೀಡಿ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ನಿರ್ಲಕ್ಷ್ಯದ ಮಾತುಗಳನ್ನಾಡಿ ಸ್ಥಳಕ್ಕೆ ಭೇಟಿ ನೀಡದೆ ನಮ್ಮ ಸಮಸ್ಯೆಗಳನ್ನು ಆಲಿಸಲು ಇದುವರೆಗೂ ಬಂದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ವಿರುದ್ಧ ಗ್ರಾಮಸ್ಥರು ಅಸಮಧಾನ ಹೊರಹಾಕಿದರು.
ಇದನ್ನೂ ಓದಿ: ಹಾಸನ | ʼದೇವನಹಳ್ಳಿ ಚಲೋʼ ಹೋರಾಟಗಾರರ ಬಂಧನ ವಿರೋಧಿಸಿ ಪ್ರತಿಭಟನೆ
ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಧರೆಗುರುಳಿದ್ದ ಮರ ಹಾಗೂ ಮಣ್ಣು ಕುಸಿತವನ್ನು ಗ್ರಾಮಸ್ಥರೇ ಸೇರಿ ತೆರವುಗೊಳಿಸಿ ನಂತರ ವಾಹನಗಳು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿ, ಬಗೆಹರಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗುಡ್ಡ ಕುಸಿತವಾಗಿರುವ ಅದೇ ಪ್ರದೇಶದಲ್ಲಿ ನಾಲ್ಕೈದು ಕುಟುಂಬಗಳು ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದು, ಮನೆಗಳು ಸಹ ಸಂಪೂರ್ಣ ಕುಸಿಯುವ ಹಂತ ತಲುಪಿವೆ. ಆ ಕುಟುಂಬಗಳು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿವೆ.