ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಸಣ್ಣಕತೆಗಳ ಅನುವಾದಿತ ಸಂಕಲನ ‘ಹಾರ್ಟ್ ಲ್ಯಾಂಪ್’ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪುರಸ್ಕಾರಕ್ಕೆ ಪರಿಗಣನೆಗೆ ಸಿದ್ಧವಾಗಿರುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.
ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕಥಾಸಂಕಲನವನ್ನು ದೀಪಾ ಭಸ್ತಿ ಅವರು ‘ಹಾರ್ಟ್ ಲ್ಯಾಂಪ್’ ಶೀರ್ಷಿಕೆಯೊಂದಿಗೆ ಇಂಗ್ಲಿಷ್‌ಗೆ ಅನುವಾದಿಸಿದ್ದರು.
“ಕನ್ನಡ ಭಾಷೆಯ ಕೃತಿಯೊಂದು ಬೂಕರ್ ಸ್ಪರ್ಧೆಗೆ ಪ್ರವೇಶ ಪಡೆದಿರುವುದು ಇದೇ ಮೊದಲ ಬಾರಿ. ಕುಟುಂಬ ಹಾಗೂ ಸಮುದಾಯದ ತುಮುಲಗಳನ್ನು ಹೃದಯಸ್ಪರ್ಶಿಯಾಗಿ ಪ್ರಾದೇಶಿಕ ಸೊಗಡಿನೊಂದಿಗೆ ಮುಷ್ತಾಕ್ ಅವರ ಕಥೆಗಳು ಕಟ್ಟಿಕೊಟ್ಟಿವೆ” ಎಂದು ತೀರ್ಪುಗಾರರು ತಿಳಿಸಿದ್ದಾರೆ.
ಅಂಚಿನಲ್ಲಿರುವ ಸಮುದಾಯಗಳಿಗೆ ದೀರ್ಘಕಾಲದಿಂದ ಧ್ವನಿಯಾಗಿರುವ ಹಾಸನ ಮೂಲದ ಮುಷ್ತಾಕ್ ಅವರು ನಾಮನಿರ್ದೇಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, “ಹಾರ್ಟ್ ಲ್ಯಾಂಪ್ ಸಂಕಲನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ʼಅತ್ಯುತ್ತಮ ಶಿವರಾತ್ರಿ ಉಡುಗೊರೆʼಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿವಿಗಳನ್ನು ಮುಚ್ಚುವ ತೀರ್ಮಾನ ಕೂಡಲೇ ಹಿಂಪಡೆಯಲು ಸಿಪಿಐಎಂ ಆಗ್ರಹ
50 ಸಾವಿರ ಪೌಂಡ್(ಸುಮಾರು ₹55 ಲಕ್ಷ) ಮೊತ್ತದ ಬೂಕರ್ ಪ್ರಶಸ್ತಿಗೆ, ಪರಿಗಣನೆಯ ಪಟ್ಟಿಯಲ್ಲಿ ಒಟ್ಟು 13 ಕೃತಿಗಳು ಪ್ರವೇಶಪಡೆದಿವೆ.
ಅಂತಿಮ ಸುತ್ತಿಗೆ ಪ್ರವೇಶ ಪಡೆಯುವ 6 ಕೃತಿಗಳ ಪೈಕಿ ಒಂದನ್ನು ಬೂಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಏಪ್ರಿಲ್ 8ರಂದು ಬೂಕರ್ ಪುರಸ್ಕಾರ ಘೋಷಣೆಯಾಗಲಿದೆ.
