ಹಸೆಮಣೆ ಏರಿ ತಾಳಿ ಕಟ್ಟಿಸಿಕೊಂಡ ನವ ವಧು ನೇರವಾಗಿ ಪರೀಕ್ಷೆ ಬರೆಯಲು, ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬಂದು ಪರೀಕ್ಷೆ ಬರೆದಿರುವ ಘಟನೆ ಹಾಸನ ನಗರದಲ್ಲಿ ಗುರುವಾರ ನಡೆದಿದೆ.
ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್ ಮತ್ತು ಅನಸೂಯ ದಂಪತಿ ಪುತ್ರಿ ಕವನ ಪರೀಕ್ಷೆ ಬರೆದ ನವವಧು. ಪ್ರೈಡ್ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿರುವ ಕವನಾಗೆ, ಮದುವೆ ನಿಗದಿಯಾಗಿತ್ತು. ಗುರುವಾರ ಬೆಳಗ್ಗೆ 9 ಗಂಟೆಗೆ ಮುಹೂರ್ತ ಹಾಸನ ಹೊರ ವಲಯದ ಗುಡ್ಡೆನಹಳ್ಳಿಯ ದಿನೇಶ್ ಎಂಬುವರ ಜೊತೆ ಕವನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l 23ರಂದು ವಿದ್ಯುತ್ ವ್ಯತ್ಯಯ
ಮದುವೆಯ ದಿನವೇ ಅಂತಿಮ ವರ್ಷದ ಕೊನೆಯ ವಿಷಯ ಪರೀಕ್ಷೆ ಇತ್ತು. ಮಾಂಗಲ್ಯ ಧಾರಣೆ ಆಗುತ್ತಿದ್ದಂತೆಯೇ, ಪರೀಕ್ಷೆಗೆ ಹಾಜರಾದ ವಧು ಕವನ ಪರೀಕ್ಷೆ ಬರೆದಿದ್ದಾರೆ. ಅಂತಿಮ ವರ್ಷದ ಬಿಕಾಂ ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಎರಡು ವಿಷಯಗಳ ಪರೀಕ್ಷೆ ಬರೆದರು. ಮದುವೆ ಮುಗಿದ ಕೂಡಲೇ ಪರೀಕ್ಷೆ ಬರೆಯಲೇಬೇಕೆಂಬ ಮಗಳ ಹಂಬಲಕ್ಕೆ ಆಕೆಯ ಪೋಷಕರು, ಒಡ ಹುಟ್ಟಿದವರು ಬೆಂಬಲ ನೀಡಿದರು. ಮುಹೂರ್ತ ಮುಗಿದ ಕೂಡಲೇ ಅಣ್ಣ ಕಾರ್ತಿಕ್ ಪರೀಕ್ಷಾ ಕೇಂದ್ರಕ್ಕೆ ಸಹೋದರಿಯನ್ನು ಕರೆದುಕೊಂಡು ಬಂದರು. ಪರೀಕ್ಷೆ ಮುಗಿದ ನಂತರ ಯುವತಿ ಕಲ್ಯಾಣ ಮಂಟಪಕ್ಕೆ ಮರಳಿ ಆರತಕ್ಷತೆ ಕಾರ್ಯಕ್ರಮದಲ್ಲಿ ಜೊತೆಗೂಡಿದರು