ಬೆಲೆ ಏರಿಕೆ ಖಂಡಿಸಿ ಹಾಸನ ನಗರದ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಪ್ರತಿಭಟನೆಯನ್ನು ಬುಧವಾರ ನಡೆಸಲಾಯಿತು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ಆಧಾಯವನ್ನು ಲೂಟಿ ಮಾಡುತ್ತಿವೆ. ಒಂದೆಡೆ ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ ಸಿಲೀಂಡರ್ ಬೆಲೆಗಳನ್ನು ವಿಪರೀತ ಹೆಚ್ಚಳ ಮಾಡಿದರೆ, ಮತ್ತೊಂದೆಡೆ ರಾಜ್ಯದ ಕಾಂಗ್ರೇಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಹಾಲು, ವಿದ್ಯುತ್, ಮತ್ತಿತರೆ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಎರಡೂ ಸರ್ಕಾರಗಳು ಜನಸಾಮಾನ್ಯರ ಮೇಲಿನ ಹೊರೆಯನ್ನು ಹೆಚ್ಚಳ ಮಾಡಲು ಪೈಪೋಟಿ ನಡೆಸುತ್ತ ಕಾಪೋರೇಟ್ ಪರವಾದ ಜನವಿರೋಧಿ ನೀತಿಗಳಾಗಿವೆ ಎಂದು ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಎಚ್.ಆರ್.ನವೀನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ರಾಜ್ಯ ಸರ್ಕಾರಗಳ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಮತ್ತು ಕಾಂಗ್ರೇಸ್ ಸರ್ಕಾರಗಳು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುವ ನೈತಿಕತೆಯನ್ನು ಸಂಪೂರ್ಣ ಕಳೆದುಕೊಂಡಿದ್ದು ಜನರಿಗೆ ಕಣ್ಣೊರೆಸುವ ನಾಟಕ ಮಾಡುತ್ತಿದ್ದಾರೆ. ಒಂದೆಡೆ ದಿನನಿತ್ಯ ದುಡಿದು ತಿನ್ನುವ ಅಸಂಘಟಿತ ಕಾರ್ಮಿಕರು, ರೈತರು, ಬೀದಿ ಬದಿ ವ್ಯಾಪಾರಸ್ತರು, ಶ್ರಮಜೀವಿಗಳ ಆಧಾಯ ವ್ಯಾಪಕವಾಗಿ ಕುಸಿಯುತ್ತಿದ್ದು, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಕೇಂದ್ರ ಮತ್ತು ರಾಜ್ಯದ ಎರಡೂ ಸರ್ಕಾರಗಳು ಬೆಲೆ ಏರಿಕೆ ನೀತಿಗಳನ್ನು ಕೈಬಿಟ್ಟು ಕೂಡಲೇ ಜನಸಾಮಾನ್ಯರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಸಂಘಟಕರು ಆಗ್ರಹಿಸಿದರು.
ಬೆಲೆ ಏರಿಕೆ ಮತ್ತು ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸಿರುವುದರಲ್ಲಿ ಎರಡೂ ಸರ್ಕಾರಗಳಿಗೂ ಯಾವುದೇ ವ್ಯತ್ಯಾಸಗಳಿಲ್ಲ. ಒಮ್ಮೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲೆಂಡರ್ ಬೆಲೆಗಳು ಹೆಚ್ಚಾದರೆ ಎಲ್ಲಾ ಅಗತ್ಯವಸ್ತುಗಳ ಬೆಲೆಗಳು ಗಗನಕ್ಕೇರುತ್ತವೆ. ಇದರಿಂದ ನಾಗರೀಕರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ಬೆಲೆ ಏರಿಕೆಯ ಲಾಭವನ್ನು ಕೆಲವೇ ಕೆಲವು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶ ಇದರ ಹಿಂದೆ ಅಡಗಿದೆ. ಇದರಿಂದಾಗಿ ಬಡವರು ಕಡು ಬಡವರಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಆರ್ಥಿಕ ಅಸಮಾನತೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಧರ್ಮೇಶ್ ಮಾತಾಡಿದರು.
ಇದನ್ನೂ ಓದಿದ್ದೀರಾ?ಹಾಸನ l ಜಾನುವಾರು ಕಳವು: ಕಳ್ಳತನ ಮಾಡಿದ ವ್ಯಕ್ತಿಗೆ ಹಲ್ಲೆ
ಈ ವೇಳೆ ಸಿಪಿಐಎಂ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಅರವಿಂದ, ಸತ್ಯನಾರಾಯಣ, ಪುಷ್ಪ, ಪ್ರಕಾಶ್, ರಮೇಶ್ ಇನ್ನಿತರರಿದ್ದರು.