ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ತಹಶೀಲ್ದಾರ್ ಕಛೇರಿ ಒಳಗೊಂಡು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ, ಭ್ರಷ್ಟಾಚಾರ ವಿರುದ್ಧ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ವತಿಯಿಂದ, ವಾರದಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಜನಪರ ಸಂಘಟನೆಯಿಂದ ಬೆಂಬಲ ವ್ಯಕ್ತ ಪಡಿಸಿ, ಪ್ರತಿಭಟನೆ ನಡೆಸುವುದಾಗಿ ಪತ್ರಿಕಾ ಗೋಷ್ಠಿ ನಡೆಸಿದರು.
ಜನತೆಗೆ ಉತ್ತಮ ಆಡಳಿತ ವ್ಯವಸ್ಥೆ ಇರಬೇಕು. ತಹಶೀಲ್ದಾರ್ ಕಛೇರಿ ಮೊದಲು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮುಂದಾಗಲು ಶುದ್ದೀಕರಣ ಇಲ್ಲಿಂದಲೇ ಪ್ರಾರಂಭ ಆಗಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿತ್ತು. ಹಲವು ಸಮಸ್ಯೆಗಳ ಕುರಿತು ತಾಲ್ಲೂಕಿನ ನೊಂದ ರೈತರು ಅರ್ಜಿಗಳನ್ನು ನೀಡಿದ್ದರು. ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಗೇಟ್ (ಕಟ್ಟೆಮನೆ) ಸರ್ವೆ ನಂ. 154 ರಲ್ಲಿ ಸುಮಾರು 60 ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ 2021-22 ಸಾಲಿನಲ್ಲಿ ಸರ್ಕಾರದ ಆದೇಶದ ಮೇರೆಗೆ ಕಂದಾಯ ಇಲಾಖೆಯ 94ಸಿ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಲ್ಲಿನ ನಿವಾಸಿಗಳು ಹತ್ತಾರು ಬಾರಿ ತಾಲ್ಲೂಕು ಕಛೇರಿಗೆ ತಿರುಗಿದರು. ಕಾನೂನಿನನ್ವಯ ಹಕ್ಕುಪತ್ರ ನೀಡಬೇಕೆಂದು ನಾವುಗಳು ಹಕ್ಕೊತ್ತಾಯ ಮಾಡಿದ್ದರು, ಏನು ಪ್ರಯೋಜನವಾಗಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಮುಖಂಡರಾದ ಮಂಜುನಾಥ್ ತಿಳಿಸಿದರು.
ಶ್ರೀಮತಿ ಲಕ್ಷ್ಮಮ್ಮ ಲೇ। ರಂಗೇಗೌಡ, ಶೆಟ್ಟಿಹಳ್ಳಿ ಗ್ರಾಮ, ಕಸಬಾ ಹೋಬಳಿ 35 ಗುಂಟೆ ಜಮೀನಿನ ಸರ್ವೆಮಾಡಿ 194 ಹೊಸ ನಂಬರ್ ನೀಡಿದ್ದಾರೆ ಇದರ ಇಂಡೀಕರಣ ಮಾಡಲು ಆಗಸ್ಟ್ 2024 ರಂದು ತಹಶೀಲ್ದಾರ್ ಅವರಿಗೆ ಸರ್ವೆಯವರು ನೀಡಿದ್ದಾರೆ. ಹಣ ನೀಡದ ಕಾರಣ ಇಲ್ಲಿಯವರೆಗೂ ಇಂಡೀಕರಣ ಮಾಡಿಲ್ಲ. ತಹಸಿಲ್ದಾರ್ ವಿ.ಎಸ್ ನವೀನ್ ಕುಮಾರ್ (ಕೆ.ಎ.ಎಸ್.) ಇವರು ಚನ್ನರಾಯಪಟ್ಟಣ ನಗರದ ಸುತ್ತ ಮುತ್ತ ಹಳ್ಳಿಗಳಲ್ಲಿ ಜಮೀನು ದುರಸ್ತು ಮಾಡಲು ಎಕರೆಗೆ ಲಕ್ಷಾಂತರ ರೂಪಾಯಿಗಳನ್ನು ರೈತರು ನೀಡಬೇಕೆಂದು ಕೇಳುತ್ತಾರೆ. ಈ ಮೂಲಕ ನೇರವಾಗಿ ಸುಲಿಗೆಗೆ ಇಳಿದಿದ್ದಾರೆ ಎಂದು ಸಂಘಟನೆಯ ಮುಖಂಡರು ತಿಳಿಸಿದರು.
ತಹಶೀಲ್ದಾರ್ ನವೀನ್ ಕುಮಾರ್ ಅವರನ್ನು ಕೂಡಲೇ ತಹಶೀಲ್ದಾರ್ ಸೇವೆಯಿಂದ ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ತೀವ್ರವಾದ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಜನಪರ ಸಂಘಟನೆ ಆಗ್ರಹಿಸಿದೆ.
ಇದನ್ನೂ ಓದಿದ್ದೀರಾ?ಹಾಸನ l ದೇವಸ್ಥಾನದಲ್ಲಿ ಅರ್ಚಕ ಅತ್ಮಹತ್ಯೆ
ಈ ವೇಳೆ ಎಚ್.ಎಸ್.ಮಂಜುನಾಥ್, ಸಂದೇಶ್, ಎಚ್ ಆರ್ ನವೀನ್ ಕುಮಾರ್, ಎಂ ಜಿ ಪೃಥ್ವಿ, ರಾಮಚಂದ್ರ ಹಳಗೇರಳ್ಳಿ, ರವಿಗೌಡಯ್ಯ ಶಂಕರಣ್ಣ ಹಾಗೂ ಇನ್ನಿತರರಿದ್ದರು.
