ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನಲ್ಲಿ ಹಾಸನ ಜಿಲ್ಲೆ ರೈತರಿಂದ ರಾಗಿ, ಭತ್ತ, ಬಿಳಿಜೋಳಗಳ ಖರೀದಿ ಪ್ರಕ್ರಿಯೆಯ ಕುರಿತು ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಪ್ರತಿ ಕ್ವಿಂಟಾಲ್ ರಾಗಿ ರೂ. 4290, ಭತ್ತ 2300, ಬಿಳಿ ಜೋಳ 3321 ರೂ. ಗಳ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ. ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ 38 ಹೋಬಳಿ ಕೇಂದ್ರಗಳಲ್ಲಿ ಡಿ.1 ರಿಂದ ರೈತರ ನೋಂದಣಿ ಕಾರ್ಯ ಪ್ರಾರಂಭ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.
ಖರೀದಿ ಕೇಂದ್ರಗಳಲ್ಲಿ ಸ್ವಚ್ಛತಾ ಕೆಲಸ ಮಾಡಲು ನಿಗಾ ವಹಿಸುವಂತೆ ಮತ್ತು ಖರೀದಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡುವಂತೆ ಸೂಚಿಸಿದರು. ಖರೀದಿ ಕೇಂದ್ರಗಳಲ್ಲಿ 2025 ರ ಜನವರಿ 1 ರಿಂದ ಮಾರ್ಚ್ 31ರ ವರೆಗೆ ರಾಗಿ, ಭತ್ತ ಬಿಳಿಜೋಳ ಖರೀದಿ ಮಾಡಲಾಗುತ್ತದೆ. ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಪ್ರೊಸ್ಟ್ ಐ.ಡಿ. ಕಡ್ಡಾಯವಾಗಿ ಇರಬೇಕು, ಒಂದು ಎಕರೆಗೆ ಎಷ್ಟು ಇಳುವರಿ ಬರುತ್ತದೆ ಎಂಬುದರ ಖರೀದಿ ಕೇಂದ್ರಗಳಲ್ಲಿ ಸ್ವಚ್ಚವಾಗಿ ಕೆಲಸ ಮಾಡಲು ಅನುಗುಣವಾಗಿ ರೈತರಿಂದ ಖರೀದಿಸಲು ಕ್ರಮ ವಹಿಸಬೇಕು, ನಿಗದಿತ ಬೆಲೆ, ಗುಣಮಟ್ಟವಿಲ್ಲದ ಉತ್ಪನ್ನಗಳನ್ನು ತಿರಸ್ಕಾರ ಮಾಡುವಂತೆ ಹಾಗೂ ಖರೀದಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಾಹಿತಿ ತಿಳಿಸಿದರು.
ಖರೀದಿ ಕೇಂದ್ರದಲ್ಲಿ ರೈತರಿಗೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ರೈತರಿಗೆ ಅನುಕೂಲವಾಗವಂತೆ ಎಲ್ಲರೂ ಸೇರಿ ಒಂದು ತಂಡವಾಗಿ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಬೇಕು. ಸಾರ್ವಜನಿಕರಿಗೆ ಮೋಸವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ನಿಗಾವಹಿಸಿ ಎಲ್ಲಾ ರೀತಿಯ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಮೂಲಕ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಐದು ವರ್ಷವೂ ಶಕ್ತಿ ಯೋಜನೆ ಅನುಷ್ಠಾನದಲ್ಲಿ ಇರಲಿದೆ: ಗೃಹ ಸಚಿವ ಜಿ ಪರಮೇಶ್ವರ್
ಈ ವೇಳೆ ಜಂಟಿ ಕೃಷಿ ನಿರ್ದೇಶಕರಾದ ರಮೇಶ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಾದ ಅರುಣ್ ಕುಮಾರ್, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು ಹಾಗೂ ಮತ್ತಿತರರು ಹಾಜರಿದ್ದರು.
