ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಶಿರಾಡಿಘಾಟ್‌ನ ಕೆಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.
ಶಿರಾಡಿಘಾಟ್ ಸೇರಿದಂತೆ ಮಲೆನಾಡು ಭಾಗದ ಕೆಲ ಗ್ರಾಮಗಳಲ್ಲಿ ಮನೆ ಕುಸಿತದ ಆತಂಕ ಎದುರಾಗಿದ್ದು, ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ವರುಣ ಅಬ್ಬರಿಸುತ್ತಿದ್ದು, ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಿರಾಡಿಘಾಟ್ ರಸ್ತೆಯಲ್ಲಿ ಹಲವು ಕಡೆ ಭೂಕುಸಿತ ಉಂಟಾಗಿದೆ. ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಬಳಿ ಭೂಮಿ ಕುಸಿಯುತ್ತಲೇ ಇದ್ದು, ಮನೆ, ಚರ್ಚ್‌ಗೆ ತೆರಳುವ ರಸ್ತೆ ಬಂದ್ ಆಗಿದೆ. ಮೂರ್ನಾಲ್ಕು ದಿನಗಳ ಹಿಂದೆಯೇ ಹೆಗ್ಗದ್ದೆ ನಿವಾಸಿ ಯಶಸ್ವಿ ಎಂಬುವವರು ಮನೆಗೆ ರಸ್ತೆ ಸಂಪರ್ಕವಿಲ್ಲದ ಕಾರಣ ಹಾಗೂ ನೀರಿನ ಸರಬರಾಜು ಸ್ಥಗಿತ ಮತ್ತು ಗುಡ್ಡ ಕುಸಿತದ ಭಯದಿಂದ ಕುಟುಂಬ ಸಹಿತ ಮನೆ ಖಾಲಿ ಮಾಡಿ ಬೇರೆಡೆಗೆ ತೆರಳಿದ್ದರು.
ಮತ್ತೊಂದೆಡೆ ನಿತ್ಯ ಸುರಿಯುತ್ತಿರುವ ಮಳೆಗೆ ಮನೆ, ಚರ್ಚ್, ಟವರ್ ಕುಸಿಯುವ ಭೀತಿ ಎದುರಾಗಿದೆ. ಒಂದು ಭಾಗದಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೊಂದೆಡೆ ಮಳೆಯ ಆರ್ಭಟಕ್ಕೆ ಗುಡ್ಡ ಕುಸಿಯುತ್ತಲೇ ಇದೆ. ಮಣ್ಣಿನ ಜೊತೆ ಮರ, ಗಿಡಗಳು ರಸ್ತೆಗೆ ಉರುಳುತ್ತಿವೆ.

ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಸಕಲೇಶಪುರ, ಆಲೂರು, ಹಾಸನ, ಬೇಲೂರು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.
ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲೆಯ ಬಹುತೇಕ ಕಡೆ ಮೋಡಕವಿದ ವಾತಾವರಣವಿದೆ. ಇನ್ನು ಸಕಲೇಶಪುರ, ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹಾಸನದ ಜೀವನದಿ ಹೇಮಾವತಿ(ಗೋರೂರು) ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹೇಮಾವತಿ ಜಲಾಶಯಕ್ಕೆ ಒಟ್ಟು 8,276 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ, ನಾಲೆಗಳು ಸೇರಿ ಒಟ್ಟು 350 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕೊಚ್ಚಿ ಹೋದ ತಡೆಗೋಡೆ
ಜೋರು ಮಳೆಗೆ ಆನೆಮಹಲ್ ಬಳಿ ರಸ್ತೆಯ ತಡೆಗೋಡೆ ಕೊಚ್ಚಿಹೋಗಿದ್ದು, ನೂರು ಮೀಟರ್ ಉದ್ದಕ್ಕೂ ಗೆಬ್ರಿಯನ್ ವಾಲ್ ಕುಸಿದಿದೆ. ರಸ್ತೆ ಸುರಕ್ಷತೆಗೆಂದು ತಡೆ ಗೋಡೆ ನಿರ್ಮಿಸಲಾಗಿತ್ತು. ಆದರೀಗ ಅದೇ ಕುಸಿದಿದೆ. ದೊಡ್ಡತಪ್ಲು ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಮರದ ಜೊತೆ ಮಣ್ಣೂ ಕೂಡ ಕುಸಿದು ಸಂಚಾರ ಸ್ಥಗಿತಗೊಂಡಿತ್ತು. ರಾತ್ರಿ 3 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಬಂದ್ ಆಗಿತ್ತು. ಮುಂಜಾನೆವರೆಗೂ ಮರ ಹಾಗೂ ಮಣ್ಣನ್ನು ರಕ್ಷಣಾ ಸಿಬ್ಬಂದಿ ತೆರವು ಮಾಡಿದರು. ಬೆಳಿಗ್ಗೆ 7ಕ್ಕೆ ಮತ್ತೆ ವಾಹನ ಸಂಚಾರ ಆರಂಭವಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ‘ಕೆಸರಲ್ಲಿ ಶಾಲೆಯೋ, ಶಾಲೆಯಲ್ಲಿ ಕೇಸರೋʼ
ಕೈ ಕೊಟ್ಟ ವಿದ್ಯುತ್
ನಿರಂತರ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಕೈಕೊಟ್ಟಿದ್ದು, ಆಲೂರು ತಾಲೂಕಿನ ಕರಿಗೌಡನಹಳ್ಳಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಐದು ದಿನಗಳಿಂದ ವಿದ್ಯುತ್ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಎಷ್ಟೇ ದೂರು ನೀಡಿದರೂ ಸೆಸ್ಕ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಆಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು” ಎಂಬುದು ಸ್ಥಳೀಯರ ಒತ್ತಾಯವಾಗಿದೆ.