ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ನಿಡಿಗೆರೆ ಅರಣ್ಯದಲ್ಲಿ ‘ಸೀಗೆ’ ಹೆಸರಿನ ಒಂಟಿಸಲಗವನ್ನು ಅರಣ್ಯ ಇಲಾಖೆ ತಂಡ ಸೆರೆ ಹಿಡಿದಿದೆ.
ಶನಿವಾರ ಏಳು ಸಾಕಾನೆಗಳೊಂದಿಗೆ ಸಮೀಪದ ಹಳ್ಳಿಬಯಲು ಗ್ರಾಮದಲ್ಲಿ ಅರಣ್ಯ ಇಲಾಖೆ ‘ಆಪರೇಷನ್ ಎಲಿಫೆಂಟ್’ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ‘ಸೀಗೆ’ ದಟ್ಟ ಕಾಡಿನೊಳಗೆ ಸೇರಿಕೊಂಡಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ‘ಸೀಗೆ’ಯನ್ನು ಪತ್ತೆ ಮಾಡಿದ್ದಾರೆ.
ನಿಡಿಗೆರೆ ಅರಣ್ಯ ಪ್ರದೇಶದಲ್ಲಿ ‘ಸೀಗೆ’ ಇರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ತಂಡ, ಬಿಕ್ಕೋಡು ಬಳಿಯಿರುವ ತಾತ್ಕಾಲಿಕ ಶಿಬಿರದಿಂದ ಲಾರಿಗಳ ಮೂಲಕ ನಿಡಿಗೆರೆ ಅರಣ್ಯ ಪ್ರದೇಶಕ್ಕೆ ಸಾಕಾನೆಗಳನ್ನು ಸ್ಥಳಾಂತರ ಮಾಡಿ, ಕಾರ್ಯಾಚರಣೆ ಆರಂಭಿಸಿತು. ಭಾನುವಾರ ಮಧ್ಯಾಹ್ನ ವೈದ್ಯರು ‘ಸೀಗೆ’ಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು. ಡಾಟ್ ಚುಚ್ಚಿಕೊಂಡ ನಂತರವೂ ಕಿ.ಮೀ.ಗಟ್ಟಲೆ ಓಡಿದ ‘ಸೀಗೆ’, ಕೊನೆಗೆ ಪ್ರಜ್ಞೆತಪ್ಪಿ ಬಿತ್ತು. ಅದನ್ನು ಆರೈಕೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ಹಗ್ಗದಿಂದ ಬಂಧಿಸಿದರು. ಪ್ರಜ್ಞೆ ಮರಳಿದ ನಂತರ ಸ್ಥಳಾಂತರಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ವಿದ್ಯಾರ್ಥಿ ಯುವಜನರ ಪ್ರಣಾಳಿಕೆ ಬಿಡುಗಡೆ
‘ಅಭಿಮನ್ಯು’ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ‘ಹರ್ಷ’, ‘ಪ್ರಶಾಂತ’, ‘ಕರ್ನಾಟಕ ಭೀಮ’, ‘ಮಹೇಂದ್ರ’, ‘ಧನಂಜಯ’, ‘ಅಶ್ವತ್ಥಾಮ’ ಸಾಕಾನೆಗಳು ಭಾಗವಹಿಸಿದ್ದವು.
ಸೆರೆಯಾದ ‘ಸೀಗೆ’ ಈ ಮೊದಲು ಇಬ್ಬರನ್ನು ಬಲಿ ಪಡೆದಿದ್ದು, ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು ಎನ್ನಲಾಗಿದೆ.
