ಹಾಸನ ಜಿಲ್ಲೆಯ ಬೇಲೂರು, ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಿದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಜಯ ಕರ್ನಾಟಕ ಜಿಲ್ಲಾ ಘಟಕದಿಂದ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಜಯ ಕರ್ನಾಟಕ ಸಂಘಟನೆಯಿಂದ ಪತ್ರಿಕಾಗೋಷ್ಠಿ ನಡೆಸಿದ ಸಂಘಟನಾಕಾರರು ಮಾತನಾಡಿ, “ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ದಶಕಗಳಿಂದ ಕಾಡಾನೆಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ದೂರಿದರು.
“ಇತ್ತೀಚಿನ ದಿನಗಳಲ್ಲಿ ಗ್ರಾಮಗಳಿಗೆ, ನೂರಾರು ಕಾಡಾನೆಗಳು ಲಗ್ಗೆ ಇಡುತ್ತಿದ್ದು, ಕಾಡಾನೆ ಹಾವಳಿ ಜಾಸ್ತಿಯಾಗಿದೆ. ರೈತರ ಕಾಫಿ ಬೆಳೆಗಳನ್ನು ತುಳಿದು, ತಿಂದು ನಾಶಪಡಿಸುತ್ತಿವೆ. ಅಲ್ಲದೆ ಕಾಡಾನೆಗಳು ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿರುವುದರಿಂದ ಆತಂಕದ ವಾತಾವರಣ ಸೃಷ್ಠಿಯಾಗಿದ್ದು, ಜೀವಹಾನಿಗೂ ಕಾರಣವಾಗಿದೆ” ಎಂದು ಜಯ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಎಂಕೆಆರ್ ಸೋಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
“ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಬಾಳ್ಳುಪೇಟೆಯಿಂದ ಹಾಸನದವರೆಗೂ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗಿತ್ತು. ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಸಮಸ್ಯೆಗಳಿಗೆ ಯಾವುದೇ ಪರಿಹಾರ ದೊರೆತಿಲ್ಲ. ಜತೆಗೆ ಕಾಡಾನೆಯಿಂದ ಬೆಳೆನಷ್ಟ ಸಂಭವಿಸಿದ ರೈತರಿಗೆ ಹಾಗೂ ಕಾಫಿ ಬೆಳೆಗಾರರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರವ ನೀಡುತ್ತಿಲ್ಲವೆಂದು 10 ವರ್ಷಗಳಿಂದಲೂ ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ಮಾಡಿದ್ದೇವೆ. ಈಗಲೂ ನಮಗೆ ನ್ಯಾಯ ಸಿಗಲಿಲ್ಲವೆಂದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಜ. 1ರಿಂದ ಮಾ. 31 ವರೆಗೆ ರಾಗಿ,ಭತ್ತ, ಬಿಳಿಜೋಳ ಖರೀದಿ: ಜಿಲ್ಲಾಧಿಕಾರಿ ಸತ್ಯಭಾಮ
ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಅಧ್ಯಕ್ಷರು ಸೇರಿದಂತೆ ಇತರರು ಇದ್ದರು.
