ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದೇ ನಡೆದಿಲ್ಲ. ಸೌಜನ್ಯ ಪ್ರಕರಣಕ್ಕೂ ಮುನ್ನ ಸುಮಾರು 460 ಕೊಲೆ ಪ್ರಕರಣಗಳು ನಡೆದಿವೆ. ಆ ಸಾವುಗಳಲ್ಲಿ 90 ಮಂದಿ ಅಪ್ರಾಪ್ತರು ಕೊಲೆಯಾಗಿದ್ದಾರೆ. ಹಲವಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ. ಆದರೆ, ಯಾವುದೇ ಪ್ರಕರಣದಲ್ಲಿಯೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. ಸೌಜನ್ಯ ಪ್ರಕರಣದಲ್ಲಿ ನಾಲ್ವರು ಜೈನ್‌ಗಳು ಕೃತ್ಯ ಎಸಗಿದ್ದಾರೆಂದು ಸೌಜನ್ಯಳ ತಾಯಿ ಶಂಕಿಸಿದ್ದಾರೆ. ಆ ನಾಲ್ವರನ್ನು ಬಂಧಿಸಿ, ವಿಚಾರಣೆ ಒಳಪಡಿಸಬೇಕು ಎಂದು ಒಡನಾಡಿ ಸಂಸ್ಥೆಯ ಎಂ.ಎಲ್ ಪರಶು ಆಗ್ರಹಿಸಿದ್ದಾರೆ.
ಹಾಸನದಲ್ಲಿ ಸಮತಾ, ಒಡನಾಡಿ ಮತ್ತು ಪ್ರೇರಣಾ ವಿಕಾಸ ವೇದಿಕೆ ಆಯೋಜಿಸಿದ್ದ ‘ಸೌಜನ್ಯ ಪ್ರಕರಣ: ಹಿಂದೆ – ಮುಂದೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪರೀಕ್ಷೆಗಾಗಿ ಕಾಲೇಜಿಗೆ ಹೋಗಿದ್ದ ಸೌಜನ್ಯ, ಮನೆಗೆ ಮರಳುವಾಗಿ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬಸ್ಥರು, ಸಂಬಂಧಿಗಳು ಎಲ್ಲಡೆ ಆಕೆಗಾಗಿ ಹುಡುಕಾಟ ನಡೆಸಿದ್ದರು. ಆಕೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ, ಮಾರನೆಯ ದಿನ ಆಕೆ ಎಲ್ಲಿ ಕಾಣೆಯಾಗಿದ್ದಳೋ ಅದೇ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಮಗಳು ನಾಪತ್ತೆಯಾಗಿದ್ದಾಳೆಂದು ದೂರು ಕೊಡಲು ಹೋದಾಗ, ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು” ಎಂದು ಆರೋಪಿಸಿದ್ದಾರೆ.
“ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿ, ಆರುವರೆ ವರ್ಷ ಜೈಲಿನಲ್ಲಿಟ್ಟಿದ್ದರು. 11 ವರ್ಷಗಳ ಬಳಿಕ ಆತ ನಿರಪರಾಧಿಯೆಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಆ ಅಮಾಯಕ ಮತ್ತು ಆತನ ಕುಟುಂಬದ ಇಡೀ ಜೀವನ ನಾಶವಾಗಿದೆ. ಇಡೀ ಕುಟುಂಬ ಇಂದಿಗೂ ನೋವಿನಿಂದ ನರಳುತ್ತಿದೆ. ಆ ನೋವಿಗೆ ನ್ಯಾಯ ಕೊಡುವವರು ಯಾರು” ಎಂದು ಪ್ರಶ್ನಿಸಿದ್ದಾರೆ.

“ಸೌಜನ್ಯ ಪ್ರಕರಣದಲ್ಲಿ ನ್ಯಾಯಾಕ್ಕಾಗಿ ಹೋರಾಟ ನಡೆಸಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನೇ ಪೊಲೀಸರು ಬಂಧಿಸಲು ಮುಂದಾಗಿದ್ದರು. ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಲು ಅಂದಿನ ದಕ್ಷಿಣ ಕನ್ನಡ ಎಸ್‌ಪಿಯಾಗಿದ್ದ ಅಭಿಷೇಕ್ ಗೋಯಲ್ ಸೂಚನೆ ನೀಡಿದ್ದರು. ಹೋರಾಟವನ್ನು ಹತ್ತಿಕ್ಕಲು ಯತ್ನಿಸಲಾಗಿತ್ತು. ಅಂದರೆ, ಈ ಪ್ರಕರಣದ ಆರೋಪಿಗಳು ಪ್ರಭಾವಿಗಳೇ ಆಗಿದ್ದಾರೆ. ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಸಂಚು ನಡೆದಿತ್ತು” ಎಂದು ಅವರು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಧರ್ಮಸ್ಥಳ | 11 ವರ್ಷದ ಹಿಂದೆ ಸೌಜನ್ಯ, 36 ವರ್ಷದ ಹಿಂದೆ ಪದ್ಮಲತಾ – ಈ ಅತ್ಯಾಚಾರ, ಕೊಲೆಗಳಿಗೆ ಕಾರಣ ಯಾರು?
“ಸೌಜನ್ಯ ಪ್ರಕರಣವನ್ನು ಪೊಲೀಸರು, ಸಿಐಡಿ, ಸಿಬಿಐ ಹಾದಿ ತಪ್ಪಿಸಿವೆ. ಸೌಜನ್ಯ ತಾಯಿ 11 ವರ್ಷದಿಂದ ಕಣ್ಣೀರು ಹಾಕುತ್ತಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಅದಕ್ಕಾಗಿ ಹೋರಾಟವೇ ದಾರಿಯಾಗಿದೆ” ಎಂದು ಅವರು ಹೇಳಿದ್ದಾರೆ.
ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ರೂಪ ಹಾಸನ, ಬಿಜಿವಿಎಸ್ ಅಧ್ಯಕ್ಷ ಗುರುರಾಜು, ಸಮತಾ ಸಂಚಾಲಕಿ ಮಮತಾ ಶಿವು, ಈ ದಿನ.ಕಾಮ್‌ನ ಕನ್ಸಲ್ಟಿಂಗ್ ಎಡಿಟರ್ ಡಿ ಉಮಾಪತಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಸಾಮಾಜಿಕ ಕಾರ್ಯಕರ್ತ ಜಾಣಜಾಣೆಯರ ಜಗದೀಶ್ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.