ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಸೆಪ್ಟೆಂಬರ್ 12ರಂದು ನಿಧನರಾಗಿದ್ದು, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ನಿವಾಸಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಸಿಗರನಹಳ್ಳಿ ಪರಿಶಿಷ್ಟ ಜಾತಿ ಕೇರಿಯಲ್ಲಿ ನಡೆದ ಸಭೆಯಲ್ಲಿ ಯೆಚೂರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದು, ಯೆಚೂರಿಯವರು ಗ್ರಾಮಕ್ಕೆ ಭೇಟಿ ನೀಡಿದ್ದ ಕ್ಷಣಗಳನ್ನು ನಿವಾಸಿಗಳು ಸ್ಮರಿಸಿಕೊಂಡರು.
“ರಾಷ್ಟ್ರ ಮತ್ತು ರಾಜ್ಯ ನಾಯಕರು ಸಮೀಪದ ಊರುಗಳಲ್ಲೇ ಇದ್ದರೂ, ಈ ಕೇರಿಗೆ ಭೇಟಿ ನೀಡಿದ ಉದಾಹರಣೆ ಇಲ್ಲ. ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದಕ್ಕೆ ಮಹಿಳೆಯರಿಗೆ ದಂಡ ಹಾಕಲಾಗಿತ್ತು. ಅದರ ವಿರುದ್ಧ ನಡೆಸಿದ ಹೋರಾಟಕ್ಕೆ ಬೆಂಬಲ ಸೂಚಿಸಲು ದೂರದ ದೆಹಲಿಯಿಂದ ಯೆಚೂರಿಯವರು ಬಂದಿದ್ದ” ಎಂದು ನೆರೆದಿದ್ದ ಸಭಿಕರು ಕಣ್ತುಂಬಿಕೊಂಡರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, “ಯೆಚೂರಿಯವರು ರಾಷ್ಟ್ರ ಕಂಡ ಧೀಮಂತ ರಾಜಕಾರಣಿ. ತೃತೀಯ ರಂಗದ ಮುಂಚೂಣಿ ನಾಯಕ. ಅವರ ನಿಧನ ನೋವಿನ ಸಂಗತಿ. ನಮ್ಮ ಪಕ್ಷ ಕೈಗೊಂಡ ತೀರ್ಮಾನದಂತೆ ಅವರು ಸಿಗರನಹಳ್ಳಿಗೆ ಭೇಟಿ ನೀಡಲು ನಿರ್ಧರಿಸಿದರು. ಅವರ ಭೇಟಿ ಸಿಗರನಹಳ್ಳಿಯಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಜನರ ನೈತಿಕತೆ ಹೆಚ್ಚಿಸಿತ್ತು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಮಹಿಳೆಯರಿಗೆ ಸಮಾನ ಅವಕಾಶ ನೀಡಿದಾಗ ಮಾತ್ರ ನೈಜ ಅಭಿವೃದ್ಧಿ ಸಾಧ್ಯ: ಸಾಹಿತಿ ರೂಪ ಹಾಸನ್
“ಯೆಚೂರಿಯವರು ಸಿಗರನಹಳ್ಳಿಗೆ ಭೇಟಿ ನೀಡುವುದನ್ನು ತಡೆಯಲು ಹಲವು ಪ್ರಯತ್ನಗಳು ನಡೆದವು. ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರು ಯೆಚೂರಿಯವರಿಗೆ ಕರೆ ಮಾಡಿ ಭೇಟಿ ನೀಡದಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ, ನಮ್ಮ ನಾಯಕರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಅದು ನಮ್ಮ ನಾಯಕ ಯೆಚೂರಿ ಮತ್ತು ಕಮ್ಯೂನಿಸ್ಟ್ ಪಕ್ಷಕ್ಕೆ ಇರುವ ಬದ್ಧತೆ” ಎಂದು ಹೇಳಿದರು.