ಫೆಬ್ರವರಿಯೊಳಗೆ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡದಿದ್ದರೆ ಮತ್ತೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಜಯಕರ್ನಾಟಕ ಸಂಘಟನೆ ಐದನೇ ದಿನದ ಹೋರಾಟ ಕೊನೆಗೊಳಿಸಿದೆ.
ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಕಾಡಾನೆಯಿಂದ ಶಾಶ್ವತ ಪರಿಹಾರಕ್ಕಾಗಿ ಜಯಕರ್ನಾಟಕ ಸಂಘಟನೆ ಐದು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಹೆಚ್ ಕೆ ಕುಮಾರಸ್ವಾಮಿ ಆಗಮಿಸಿ ಕೆಲ ಸಮಯ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಾಡಾನೆ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ಜಯಕರ್ನಾಟಕಕ್ಕೆ ನಮ್ಮ ಬೆಂಬಲ ಇದ್ದೆ ಇರುತ್ತದೆ ಎಂದು ಭರವಸೆ ನೀಡಿದರು. ಕಾಡಾನೆ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ಜಯಕರ್ನಾಟಕಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದ ಬಳಿಕ ಸಂಘಟನಾಕಾರರು ಪ್ರತಿಭಟನೆ ಹಿಂಪಡೆದಿದ್ದಾರೆ.
“ಕಾಡಾನೆ ವಿಚಾರವಾಗಿ ಸರ್ಕಾರಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಆಲೂರು, ಬೇಲೂರು ಭಾಗಗಳಲ್ಲಿ ಆನೆಗಳ ಹಾವಳಿ ಅಧಿಕವಾಗಿದೆ. ಸಕಲೇಶಪುರದಲ್ಲಿ ಸ್ವಲ್ಪ ಕಡಿಮೆಯಿದೆ. ರೈತರ ಬೆಳೆಗಳು ಸಾಕಷ್ಟು ನಷ್ಟವಾಗಿದೆ. ಕಳೆದ 10 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ವೇಳೆ ಎ ಮಂಜು ಸಚಿವರಾಗಿದ್ದಾಗ ಬೇಲೂರು ತಾಲೂಕಿನಲ್ಲಿ ಒಂದು ಕಾಡಾನೆ ಕಾರಿಡರ್ ಮಾಡಿ ಒಂದು ಶಾಶ್ವತ ಪರಿಹಾರ ಮಾಡಬೇಕು, ತಾತ್ಕಲಿಕ ಪರಿಹಾರದಿಂದ ಯಾವುದೇ ಪ್ರಯೋಜನ ಆಗುವುದಿಲ್ಲವೆಂದು ಮನಗಂಡು 17 ಸಾವಿರ ಎಕರೆ ಅರಣ್ಯ ಭೂಮಿ ಮತ್ತು ರೆವಿನ್ಯೂ ಭೂಮಿಯನ್ನು ಆನೆಕಾರಿಡರ್ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು” ಎಂದು ಮಾಜಿ ಸಚಿವ ಎಚ್ ಕೆ ಕುಮಾರಸ್ವಾಮಿ ಹೇಳಿದರು.
“ಆನೆ ಕಾರಿಡಾರ್‌ಗೆ ರೈತರಿಂದ ಪಡೆದಿರುವ ಭೂಮಿಗೆ ಭೂ ಪರಿಹಾರ ಕೊಡಬೇಕೆಂದು ಎಷ್ಟೇ ಒತ್ತಡ ಹಾಕಿದರೂ ಕೂಡಾ ಈವರೆಗೆ ಜಾರಿಗೆ ಬಂದಿಲ್ಲ. ತಾತ್ಕಲಿಕ ಕ್ರಮ ಆಗುತ್ತಿದೆಯೇ ಹೊರತು ಮೂಲ ಉದ್ದೇಶ, ಮೂಲ ಕಾರಣ ಇಲಾಖೆಗೆ ಗೊತ್ತಾಗುತ್ತಿಲ್ಲ” ಎಂದು ದೂರಿದರು.
“ಯಾವ ಕಾರಣಕ್ಕಾಗಿ ಕಾಡಾನೆಗಳು ನಾಡಿಗೆ ಬರುತ್ತಿವೆಂದರೆ ಕಾಡಿನಲ್ಲಿ ಆಹಾರವಿಲ್ಲ, ಕಾಡು ನಾಡಾಗಿ ಪರಿವರ್ತನೆಯಾಗಿರುವುದರಿಂದ ಕಾಡಾನೆಗಳು ನಾಡಿನೊಳಗೆ ಲಗ್ಗೆಯಿಡುತ್ತಿವೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು, ಸೌತ್ ಆಪ್ರಿಕಾದ ನ್ಯಾಷನಲ್ ಪಾರ್ಕ್‌ನಲ್ಲಿರುವ ಆನೆಗಳ ಪಾರ್ಕ್‌ನಂತಹ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ನಾಲ್ಕು ತಾಲೂಕುಗಳಲ್ಲಿ ಉಂಟಾಗಿರುವ ಬೆಳೆಹಾನಿ ಬಗ್ಗೆ ಗಮನಹರಿಸಬೇಕು. ಆನೆ ದಾಳಿಯಾದ ಕುಟುಂಬಕ್ಕೆ ಒಂದು ಶಾಶ್ವತ ಉದ್ಯೋಗ ನೀಡಿ, ಬೆಳೆಹಾನಿಗೆ ವೈಜ್ಞಾನಿಕವಾಗಿ ಪರಿಹಾರ ತುಂಬಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಅನುಭವ ಮಂಟಪದಲ್ಲಿ ಅಸ್ಪೃಶ್ಯರಿಗೆ ಪಾಠ ಪ್ರವಚನ ಕಲಿಸುತ್ತಿದ್ದರು: ಲೋಕೇಶ್ ಚಂದ್ರ
ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಂಕೆಆರ್ ಸೋಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ರೈತ ಸಂಘದ ಮುಖಂಡ ಬಳ್ಳೂರು ಸ್ವಾಮಿಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್ ದ್ಯಾವೇಗೌಡ, ಜಯಕರ್ನಾಟಕ ಬೇಲೂರು ತಾಲೂಕು ಅಧ್ಯಕ್ಷ ಎಸ್ ಎಂ ರಾಜು, ಆಲೂರು ತಾಲೂಕು ಅಧ್ಯಕ್ಷ ಸಂದೇಶ್, ಕಾಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.