ಹಾಸನ ಕ್ಷೇತ್ರದ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರ ಮೇಲಿರುವ ಲೈಂಗಿಕ ಕಿರುಕುಳದ ಕೇಸುಗಳ ಪೈಕಿ ಒಂದು ಪ್ರಕರಣ ವಿಚಾರಣೆ ಇದೇ 23ರಿಂದ ದಿನ ನಿತ್ಯ ನಡೆಯಲಿದೆ.
ಮನೆಗೆಲಸದ ಹೆಣ್ಣುಮಗಳ ಮೇಲೆ ಹೊಳೆನರಸೀಪುರದ ಗನ್ನಿಗಢ ಫಾರ್ಮ್ ಹೌಸ್ ಲೈಂಗಿಕ ಹಲ್ಲೆಯ ಪ್ರಕರಣವನ್ನು ಸಂಸದರ ಮತ್ತು ಶಾಸಕರ ವಿಶೇಷ ನ್ಯಾಯಾಲಯವು ಈ ತಿಂಗಳ 23ರಿಂದ 29ರ(ಭಾನುವಾರ ಹೊರತುಪಡಿಸಿ) ತನಕ ನಡೆಸಲಿದೆ.
2021ರ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಪ್ರಜ್ವಲ್ ಈ ಗೆಸ್ಟ್ ಹೌಸ್‌ಗೆ ಬಂದು ಈ ಹೆಣ್ಣುಮಗಳ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾಗಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಳ್ಳಲಾಗಿರುವ ಆಪಾದನಾ ಪಟ್ಟಿಯಲ್ಲಿ ಹೇಳಲಾಗಿದೆ. ಆಪಾದನಾಪಟ್ಟಿಯ ಪ್ರಕಾರ ಪ್ರಜ್ವಲ್ ಈ ಹಲ್ಲೆಯನ್ನು ತಮ್ಮ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಹೆಣ್ಣುಮಗಳು 2022ರಲ್ಲಿ ಗೆಸ್ಟ್ ಹೌಸ್ ಕೆಲಸವನ್ನು ತೊರೆದು ತಮ್ಮ ಹಳ್ಳಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದರು. 2024ರ ಏಪ್ರಿಲ್ 28ರಿಂದ ಜೂನ್ 10ರ ಅವಧಿಯಲ್ಲಿ ಪ್ರಜ್ವಲ್ ವಿರುದ್ಧ ಲೈಂಗಿಕ ಹಲ್ಲೆಯ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಬೆಂಗಳೂರಿನಲ್ಲಿ ಮೂರು ಮತ್ತು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಒಂದು ಎಫ್‌ಐಆರ್ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಪಂಚಮಸಾಲಿ ಸಮಾಜದ ಹಿಡಿತಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ
ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರ ಮೇಲೆ ನಡೆಸಲಾದ ಲೈಂಗಿಕ ಹಲ್ಲೆ ಪ್ರಕರಣದಲ್ಲಿ ಪ್ರಜ್ವಲ್ ಅವರ ಜಾಮೀನು ಕೋರಿಕೆ ಅರ್ಜಿಯನ್ನು ನ್ಯಾಯಾಲಯ ನೆನ್ನೆ(ಏಪ್ರಿಲ್ 19) ತಿರಸ್ಕರಿಸಿತ್ತು. ಲೈಂಗಿಕ ಹಲ್ಲೆಗೆ ಗುರಿಯಾದ ಹೆಣ್ಣುಮಗಳು ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಲಿದ್ದಾರೆ.