ಕೃಷಿ ಚಟುವಟಿಕೆ ಹಾಗೂ ಜನಜೀವನಕ್ಕೆ ಕಂಟಕವಾಗಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಹಾಸನ ನಗರ ಮತ್ತು ಗ್ರಾಮಾಂತರ ಜಿಲ್ಲಾ ಸಮಿತಿಗಳ ವಿಶೇಷ ಜಂಟಿ ಸಭೆಯಲ್ಲಿ ಮಾತನಾಡಿದರು.
“ಕಾಡಾನೆ ದಾಳಿಯಿಂದ ಮೃತರ ಕುಟುಂಬಕ್ಕೆ ವೈಜ್ಞಾನಿಕವಾಗಿ ನ್ಯಾಯ ಸಮ್ಮತ ಪರಿಹಾರ ನಿಗದಿ ಮಾಡಬೇಕು. ಬೆಳೆ ಕಟಾವು ಸಂದರ್ಭದಲ್ಲಿ ರೈತರ ಜಮೀನುಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅರಣ್ಯ ಇಲಾಖೆಗೆ ತರಬೇತಿ ಹೊಂದಿದ ಅಧಿಕಾರಿಗಳು ಹಾಗೂ ಪರಿಣಿತ ಸಿಬ್ಬಂದಿ ನೇಮಕವಾಗಬೇಕು. ಆನೆಧಾಮ ನಿರ್ಮಾಣ ಕಾರ್ಯ ಕೂಡಲೇ ಆರಂಭಿಸಿ ಸಕಲೇಶಪುರ ಹಾಗೂ ಆಲೂರು ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ಸಾಕುವ ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸಭೆಯಲ್ಲಿ ಪಕ್ಷವನ್ನು ಜಿಪಂ ಹಾಗೂ ತಾಪಂ ಚುನಾವಣೆಗೆ ಬಲಿಷ್ಠವಾಗಿ ಸಂಘಟಿಸಲು ಬೂತು ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ನಿರ್ಧಾರ ಮಾಡಲಾಯಿತು. ಹಾಗೂ ಪಕ್ಷದ ಆಂತರಿಕ ಚುನಾವಣೆಯ ಅವಲೋಕನ ಮಾಡಿದರು.
ಈ ಸುದ್ದಿ ಓದಿದ್ದೀರಾ? ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ವರ್ ಪುತ್ರನ ಹತ್ಯೆಗೆ ಸಂಚು, ಸ್ವಲ್ಪದರಲ್ಲೇ ಹತ್ಯೆಯಿಂದ ಪಾರು
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಅಕ್ರಮ್ ಮೌಲಾನಾ, ಹಾಸನ ನಗರ ಜಿಲ್ಲಾಧ್ಯಕ್ಷ ಸಿದ್ದೀಕ್ ಆನೆಮಹಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಇಮ್ರಾನ್ ಅರೇಹಳ್ಳಿ, ವಿಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾಧ್ಯಕ್ಷೆ ಅಫ್ರೋಜಾ ಬೇಗಂ, ಪ್ರಧಾನ ಕಾರ್ಯದರ್ಶಿ ಸಾಹಿರಾ ಬಾನು ಮತ್ತು ಜಿಲ್ಲಾ ಮುಖಂಡರು, ವಿಧಾನಸಭಾ ಮುಖಂಡರು ಇದ್ದರು.
