ಹಾಸನ ನಗರದ ತಣ್ಣೀರುಹಳ್ಳ ವೃತ್ತದಿಂದ ಸಕಲೇಶಪುರದ ಕಡೆಗೆ ಹಾದುಹೋಗುವ ಹೆದ್ದಾರಿ ಪಕ್ಕದಲ್ಲಿ ಅಕ್ರಮ ಒತ್ತುವರಿ ಮಾಡಿಕೊಂಡಿದ್ದಾರೆಂದು ನಗರಸಭೆ ತೆರೆವು ಕಾರ್ಯಾಚರಣೆ ಆರಂಭಿಸಿದ್ದು, ವಾಣಿಜ್ಯ ಕಟ್ಟಡಗಳ ಎದುರು ಹಾಕಲಾಗಿದ್ದ ಶೆಡ್‌ಗಳು, ಬೃಹತ್ ಜಾಹೀರಾತು ಫಲಕಗಳು, ದೊಡ್ಡ ಫ್ಲೆಕ್ಸ್, ಸೆಕ್ಯೂರಿಟಿ ಬೂತ್ ಸೇರಿದಂತೆ ಅನೇಕ ಅಕ್ರಮ ಒತ್ತುವರಿಯನ್ನು ತೆರೆವುಗೊಳಿಸಿದ್ದಾರೆ.
ನಗರದ ತಣ್ಣೀರು ಹಳ್ಳದಿಂದ ಸಕಲೇಶಪುರ ಮಾರ್ಗದ ರಸ್ತೆಗಳ ಅಕ್ಕಪಕ್ಕದಲ್ಲಿ ಇದ್ದಂತಹ ಅಕ್ರಮ ಶೆಡ್, ಬ್ಯಾನರ್, ಫ್ಲೆಕ್ಸ್ ಹಾಗೂ ಕಟ್ಟಡವನ್ನು ನಗರಸಭೆ ಆಯುಕ್ತ ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ಹಿಂದೆ ನಗರದ ಬಿಎಮ್ ರಸ್ತೆಯುದ್ದಕ್ಕೂ ಅಕ್ರಮವಾಗಿ ಹಾಕಲಾಗಿದ್ದ ಫ್ಲೆಕ್ಸ್, ಬ್ಯಾನರ್, ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಲಾಗಿತ್ತು. ಇಂದು ಮುಂಜಾನೆಯೂ ಏಕಾಏಕಿ ತೆರವು ಕಾರ್ಯಚರಣೆ ಕೈಗೊಂಡಾಗ ಇಲ್ಲಿನ ಅಂಗಡಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿ ಆಯುಕ್ತರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಸ್ಥಳೀಯರು, “ನಗರಸಭೆಯವರು ಯಾರಿಗೂ ನೋಟಿಸ್ ಜಾರಿ ಮಾಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬಡವರ ಅನೇಕ ಗೂಡಂಗಡಿ ಒಡೆದು ಹಾಕಿದ್ದು, ಕೆಲ ನಿರ್ದಿಷ್ಟ ವ್ಯಕ್ತಿಗಳಿಗೆ ಸೇರಿದ ಒತ್ತುವರಿಯನ್ನೇಕೆ ತೆರವು ಮಾಡಿಲ್ಲ. ಯಾವುದೇ ತೆರವು ಕಾರ್ಯಾಚರಣೆಗೆ ನೋಟಿಸ್ ಜಾರಿ ಮಾಡಬೇಕು. ಆದರೆ ನಗರಸಭೆಯಿಂದ ವಿಷಯ ತಿಳಿಸದೆ ಕಾರ್ಯಾಚರಣೆ ಕೈಗೊಂಡಿರುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕರ್ನಾಟಕ ಒನ್ ಸೇವಾ ಕೇಂದ್ರ ಜನಸಾಮಾನ್ಯರಿಗೆ ಅನುಕೂಲ: ಶಾಸಕ ಕೆ ಎಸ್ ಆನಂದ್
“ಈ ಬಗ್ಗೆ ಪ್ರಶ್ನಿಸಿದರೆ ಜಿಲ್ಲಾಧಿಕಾರಿಗಳು ನಮಗೆ ಆದೇಶ ನೀಡಿದ್ದಾರೆಂದು ಆಯುಕ್ತರು ಹೇಳುತ್ತಾರೆ. ಬಡ ಮಧ್ಯಮ ವರ್ಗದ ವ್ಯಾಪರಸ್ಥರಿಗೆ ತೀವ್ರ ತೊಂದರೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಮುಖ್ಯ ಎಂಜಿನಿಯರ್ ವೆಂಕಟೇಶ್, ದೀಪಕ್, ಆರೋಗ್ಯ ನಿರೀಕ್ಷಕ ಪ್ರಸಾದ್, ಚನ್ನೇಗೌಡ ಸೇರಿದಂತೆ ಇತರರು ಇದ್ದರು.