ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದೆ. 100 ರೂ. ಕೊಟ್ಟು ಟೊಮೆಟೊ ಖರೀದಿಸಲು ಸಾದ್ಯವಾಗದಿರುವವರು ಹುಣಸೆಹಣ್ಣು ಬಳಸಿ ಅಡುಗೆ ಮಾಡುತ್ತಿದ್ದಾರೆ. ಟೊಮೆಟೊ ಬೆಳೆದಿರುವ ರೈತರು ತಮ್ಮ ಜಮೀನುಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ, ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನವಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲುಕಿನಲ್ಲಿ ನಡೆದಿದೆ.
ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ರೈತ ಧರಣಿ ಎಂಬಾತ ಬೆಳೆದಿದ್ದ ಟೊಮೆಟೊ ಕಳ್ಳತನವಾಗಿದೆ. ಧರಣಿ ಅವರು ಟೊಮೆಟೊ ಬೆಳೆ ಬೆಳೆದಿದ್ದರು. ಉತ್ತಮ ಇಳುವರಿಯೂ ಬಂದಿತ್ತು. ಈಗಾಗಲೇ ಒಮ್ಮೆ ಕಟಾವು ಮಾಡಿ, ಮಾರಾಟವನ್ನೂ ಮಾಡಿದ್ದರು. ಹಾಕಿದ್ದ ಬಂಡವಾಳದ ಜೊತೆಗೆ ಲಾಭವೂ ದೊರೆಯುತ್ತಿದೆ ಎಂಬ ಸಂತೋಷದಲ್ಲಿದ್ದರು.
ಆದರೆ, ಅವರ ಸಂತೋಷಕ್ಕೆ ಕಳ್ಳಲು ತಣ್ಣೀರು ಎರೆಚಿದ್ದಾರೆ. ಮಂಗಳವಾರ ರಾತ್ರಿ ಅವರ ತೋಟಕ್ಕೆ ನುಗ್ಗಿದ ಕಳ್ಳರು ಟೊಮೆಟೊವನ್ನು ಕದ್ದು ಹೊತ್ತೊಯ್ದಿದ್ದಾರೆ. ಸುಮಾರು 1.5 ಲಕ್ಷ ರೂ. ಮೌಲ್ಯದ ಟೊಮೆಟೊ ಕಳುವಾಗಿದೆ ಎಂದು ರೈತ ಧರಣಿ ಹೇಳಿದ್ದಾರೆ. ಹಳೇಬೀಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಜುಲೈ 4ರ ಮಂಗಳವಾರವಷ್ಟೇ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದ ಸಂತೆಯಲ್ಲಿ ಟೊಮೆಟೊ ಮಾರಾಟಕ್ಕೆ ಮಳಿಗೆ ಹಾಕಿದ್ದ ರೈತರೊಬ್ಬರು ತಮ್ಮ ಮಳಿಗೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. “ಹಾವೇರಿಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ 130 ರೂ. ಇದೆ. ಹೀಗಾಗಿ, ಟೊಮೆಟೊ ಕಳ್ಳರ ಹಾವಳಿ ಹೆಚ್ಚಾಗಿದೆ. ಅದಕ್ಕಾಗಿ, ಸಿಸಿ ಕ್ಯಾಮೆರಾ ಹಾಕಿದ್ದೇನೆ” ಎಂದು ರೈತ ಮಲ್ಲಪ್ಪ ಹೇಳಿದ್ದರು.