ಕಳೆದ ಏಳು ತಿಂಗಳಿಂದ ಕಾರ್ಮಿಕರ ಕೈಸೇರದ ವೇತನವನ್ನು ಕೂಡಲೇ ನೀಡಬೇಕೆಂದು ಆಗ್ರಹಿಸಿ ಹಾಸನ ನಗರ ಸಮೀಪದ ಹನುಮಂತಪುರ ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಮಿನರ್ವ ಮಿಲ್ ಫ್ಯಾಕ್ಟರಿ ಎದುರು ಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.
ಎಐಟಿಯುಸಿ ಜಿಲ್ಲಾಧ್ಯಕ್ಷ ಎಂ ಸಿ ಡೋಂಗ್ರೆ ಮಾತನಾಡಿ, “ನ್ಯೂ ಮಿನರ್ವ ಮಿಲ್ ಸಂಸ್ಥೆಯು ನ್ಯಾಷನಲ್ ಟೆಕ್ಸ್ಟೈಲ್ಸ್ ಕಾರ್ಪೊರೇಷನ್(ಎನ್ಟಿಸಿ) ಭಾಗವಾಗಿದ್ದು, ದೇಶಾದ್ಯಂತ ಈ ರೀತಿಯ 23 ಘಟಕಗಳಿವೆ. ಈ ಎಲ್ಲ ಘಟಕಗಳು ಮಾರ್ಚ್ 2020ರಿಂದ ಸ್ಥಗಿತಗೊಂಡಿವೆ. 2020ರ ಏಪ್ರಿಲ್ 1ರಿಂದ ಕಾರ್ಮಿಕರಿಗೆ ಪೂರ್ತಿ ಸಂಬಳ ನೀಡದೆ ಶೇ.50ರಷ್ಟು ಸಂಬಳ ನೀಡುತ್ತ ಬಂದಿದ್ದಾರೆ” ಎಂದು ದೂರಿದರು.
“ಬಾಕಿ ಉಳಿದಿರುವ ವೇತನವನ್ನು ನಿರ್ದಿಷ್ಟ ಸಮಯದಲ್ಲಿ ನೀಡದೆ ಯಾವಾಗಲೋ ಒಮ್ಮೊಮ್ಮೆ ನೀಡುತ್ತಿದ್ದಾರೆ. 2024ರ ನವೆಂಬರ್ನಿಂದ ವೇತನವನ್ನೇ ನೀಡಿಲ್ಲ. ಇದರಿಂದಾಗಿ ಕಾರ್ಮಿಕರ ಜೀವನ ಆತಂತ್ರಗೊಂಡಿದೆ. ಇದರ ಪರಿಣಾಮವಾಗಿ ಕಾರ್ಮಿಕರ ಇಎಸ್ಐ, ಪಿಎಫ್ ಕಂತುಗಳು ಸಂದಾಯವಾಗದೆ, ಈ ಸೌಲಭ್ಯಗಳು ಇದ್ದೂ ಇಲ್ಲದಂತಾಗಿವೆ” ಎಂದು ಕಳವಳ ವ್ಯಕ್ತಪಡಿಸಿದರು.
“ಈ ವಿಚಾರಗಳ ಕುರಿತು ಅನೇಕ ಬಾರಿ ಮ್ಯಾನೇಜ್ಮೆಂಟ್ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಕುರಿತು ಈ ವಿಚಾರಗಳನ್ನು ಮುಂದಿಟ್ಟುಕೊಂಡು ನ್ಯೂ ಮಿನರ್ವ ಮಿಲ್ ಫ್ಯಾಕ್ಟರಿ ಮುಂದೆ ಕಾರ್ಮಿಕರು ಸೇರಿ ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ” ಎಂದರು.
“ಸರ್ಕಾರದ ಗಮನ ಸೆಳೆದರೂ ಕೂಡ ಈವರೆಗೂ ಯಾವುದೇ ರೀತಿಯ ಸಮಸ್ಯೆ ಬಗೆಹರಿಸಿಲ್ಲ. ಮಿನರ್ವ್ ಮಿಲ್ ಬಟ್ಟೆ ಪ್ಯಾಕ್ಟರಿ ಮ್ಯಾನೇಜ್ಮೆಂಟ್ ಅತ್ಯಂತ ಬೇಜವಾಬ್ದಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಕೂಡಲೇ ಏಳು ತಿಂಗಳ ಸಂಬಳವನ್ನು ಕೊಡುವಂತೆ ಆಗ್ರಹಿಸಿ ಶನಿವಾರದಿಂದ ತೀವ್ರತರ ಹೋರಾಟ ಆರಂಭವಾಗಿದೆ. ನಮ್ಮ ಬೇಡಿಕೆ ಈಡೇರದಿದ್ದರೆ, ಇಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಹೋಗಿ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ವೈಜ್ಞಾನಿಕ ಕೃಷಿ ಪದ್ಧತಿಯಿಂದ ಹೆಚ್ಚು ಇಳುವರಿ ಪಡೆಯಿರಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ
ಕಾರ್ಮಿಕರಿಗೆ ಆಗುತ್ತಿರುವ ಈ ಅನ್ಯಾಯವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಗಮನಕ್ಕೆ ತೆಗೆದುಕೊಂಡು ಮಧ್ಯ ಪ್ರವೇಶಿಸಬೇಕು. 2020ರ ಮಾರ್ಚ್ನಿಂದ ಸ್ಥಗಿತಗೊಂಡಿರುವ ಘಟಕದ ಪುನರಾರಂಭಕ್ಕೆ ಹಾಗೂ ಕಾರ್ಮಿಕರಿಗೆ ಬಾಕಿ ವೇತನ ಕೊಡಿಸುವಂತಹ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಅನಿರ್ಧಿಷ್ಟಾವಧಿ ಪ್ರತಿಭಟನೆಯಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಬಿ ಎಂ ಮಧು, ಉಪಾಧ್ಯಕ್ಷ ಜೆ ಆರ್ ಸಂತೋಷ್, ಕಾರ್ಯದರ್ಶಿ ಹೆಚ್ ಎಸ್ ಮಂಜೇಗೌಡ, ಖಜಾಂಚಿ ಜೆ ಸಿ ಲೋಕೇಶ್ ಸೇರಿದಂತೆ ನ್ಯೂ ಮಿನರ್ವ ಮಿಲ್ನ ಕಾರ್ಮಿಕರು ಇದ್ದರು.
