ಲೋಕಸಭೆಯಲ್ಲಿ ಕಾರ್ಮಿಕರು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಒಕ್ಕೂಟ ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ(SKM)ದ ಹಾಸನದ ರೈತ ಮುಖಂಡರು ಸಂಸದ ಶ್ರೇಯಸ್ ಪಟೇಲ್‌ಗೆ ಮನವಿ ಸಲ್ಲಿಸಿದರು.
ಆಳುವ ಸರ್ಕಾರಗಳು ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ರೈತರನ್ನು ಪ್ರಸ್ತುತ ಬಿಕಟ್ಟಿನಿಂದ ಹೊರ ತರಲು ಕ್ರಮ ಕೈಗೊಳ್ಳಬೇಕು ಮತ್ತು ರೈತ ವಿರೋಧಿ ಕಾಯ್ದೆಗಳನ್ನು ರಚಿಸುವುದನ್ನು ನಿಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಸದ್ಯ ದೇಶದಲ್ಲಿ ದುಡಿವ ಜನತೆ ಮಿತಿಮೀರಿದ ಸಾಲಸೋಲಗಳು, ನಿರುದ್ಯೋಗ, ಬೆಲೆಯೇರಿಕೆಯಂತಹ ತೀವ್ರವಾದ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಪ್ರತಿನಿತ್ಯ ಸರಾಸರಿ 31 ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಳವಾದ ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಗಳು, ಗ್ರಾಮೀಣದಿಂದ ಪಟ್ಟಣಗಳಿಗೆ ಸಂಕಷ್ಟ ವಲಸೆ ಹಾಗೂ ಆದಾಯ ಮತ್ತು ಸಂಪತ್ತಿನ ಹೆಚ್ಚುತ್ತಿರುವ ಅಸಮಾನತೆ ಇವುಗಳ ಪರಿಹಾರಕ್ಕೆ ಸರಕಾರದ ನೀತಿಗಳಲ್ಲಿ ಬದಲಾವಣೆ ಅಗತ್ಯವಿದೆ. ಆದ ಕಾರಣ, ಕಾರ್ಪೊರೇಟ್ ಪರ ನೀತಿಗಳಲ್ಲಿ ಮಾರ್ಪಾಡು, 9-12-2021ರ ಒಡಂಬಡಿಕೆಯ ಅನುಷ್ಠಾನ ಹಾಗೂ ಇನ್ನಿತರ ಪ್ರಮುಖ ಹಕ್ಕೊತ್ತಾಯಗಳನ್ನು ಮುಂದಿಟ್ಟು ಹೋರಾಟವನ್ನು ಪುನರಾರಂಭಿಸಲು ಎಸ್‌ಕೆಎಂ ನಿರ್ಧರಿಸಿವುದಾಗಿ ಮುಖಂಡರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ರೈತರು ಮತ್ತು ಕೃಷಿ ಕಾರ್ಮಿಕರಾದ ನಮ್ಮೊಂದಿಗೆ ಸಂಸದರು ನಿಲ್ಲಬೇಕು. ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ಪ್ರಧಾನ ಮಂತ್ರಿ ಮತ್ತು ಕ್ಯಾಬಿನೆಟ್‌ನ ಮೇಲೆ ಒತ್ತಡ ತರಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ವಿನಂತಿಸಿದ್ದಾರೆ.
ರೈತರ ಮತ್ತು ಕೃಷಿ ಕಾರ್ಮಿಕರ ಭೂಮಿ ಹಾಗೂ ಜಾನುವಾರು ಸಂಪನ್ಮೂಲಗಳನ್ನು ರಕ್ಷಿಸಿ, ಅವರು ತೀವ್ರ ಕೃಷಿ ಬಿಕ್ಕಟ್ಟಿನಿಂದಾಗಿ ದಿವಾಳಿಯಾಗುವುದನ್ನು ತಡೆಗಟ್ಟಬೇಕು. ಸಣ್ಣ ಉತ್ಪಾದಕರ ಹಾಗೂ ದುಡಿಮೆಗಾರರ ಉದ್ಯೋಗ ಮತ್ತು ಕನಿಷ್ಠ ಕೂಲಿಗೆ ಭದ್ರತೆ ಒದಗಿಸಿ ಅವರಿಗೆ ಘನತೆಯ ಬದುಕನ್ನು ಖಾತರಿಪಡಿಸಬೇಕು. ಅವರನ್ನು ಸಾಲದ ಸುಳಿಯಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟ ವಲಸೆಯಿಂದ ಉಳಿಸಬೇಕು. ಉತ್ಪಾದಕರ ಸಹಕಾರಿಗಳು ಮತ್ತು ಸಮಷ್ಟಿಗಳನ್ನು, ಹಾಗೆಯೇ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಳಗೊಂಡ ಒಕ್ಕೂಟಗಳಿಗೆ ಉತ್ತೇಜನ ನೀಡಬೇಕು, ಅವುಗಳಿಗೆ ಸಾರ್ವಜನಿಕ ವಲಯದ ಸಾಲಗಳು, ಕೃಷಿ ಸಂಸ್ಕರಣೆ, ಮೌಲ್ಯ ವರ್ಧನೆ, ಮೂಲ ಸೌಕರ್ಯಗಳ ಜಾಲ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸಂಶೋಧನೆ-ಅಭಿವೃದ್ಧಿಯ ಸೌಲಭ್ಯಗಳ ಬೆಂಬಲವನ್ನು ಒದಗಿಸಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ಮನವಿಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್: 9 ಕ್ರೀಡಾಪಟುಗಳಿಗೆ ಅನುದಾನ ಮಂಜೂರು ಮಾಡಿದ ಸಿಎಂ ಸಿದ್ದರಾಮಯ್ಯ
ಹಾಸನ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ ಅವರಿಗೆ ಅಪರ ಜಿಲ್ಲಾಧಿಕಾರಿಗಳ ಮೂಲಕ ರೈತರ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸುವ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಹಾಸನ ಜಿಲ್ಲಾಧ್ಯಕ್ಷ ಎಚ್ ಆರ್ ನವೀನ್ ಕುಮಾರ್, ದಲಿತ ಹಕ್ಕುಗಳ ಸಮಿತಿಯ ಪೃಥ್ವಿ ಎಂ ಜಿ, ಕೆಪಿಆರ್‌ಎಸ್‌ನ ಜಯಮ್ಮ ಎಲ್ ಎಸ್, ಮೂರ್ತಿ ಎಂಬಿ ಹಾಗೂ ರಮೇಶ್ ಉಪಸ್ಥಿತರಿದ್ದರು.