ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆಯಿದೆ ಎಂದು ಸಮೀಪದ ಕೆರೆಯಿಂದ ನೀರು ತರಲು ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರು ಕಳುಹಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಆಂದೂರು ಗ್ರಾಮದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ 20 ವಿದ್ಯಾರ್ಥಿಗಳನ್ನು ಕೆರೆಯಿಂದ ನೀರು ತರಲು ಕಳುಹಿಸಲಾಗಿದೆ. ವಿದ್ಯಾರ್ಥಿಗಳನ್ನು ಕೆರೆಗೆ ಕಳುಹಿಸಿದ್ದ ಪ್ರಾಂಶುಪಾಲರು, ಕಚೇರಿ ಸಹಾಯಕ, ಸೆಕ್ಯುರಿಟಿ ಹಾಗೂ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರ ಶಶಿಧರ್ ಮೌರ್ಯ ಆಗ್ರಹಿಸಿದ್ದಾರೆ.
“ಭಾರೀ ಮಳೆಯಿಂದಾಗಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಈ ವೇಳೆ, ವಸತಿ ಶಾಲೆಯಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿಗಳನ್ನು ಶಾಲೆಯಿಂದ 0.5 ಕಿಮೀ ದೂರದಲ್ಲಿರುವ ಕೆರೆಗೆ ನೀರು ತರಲು ಕಳುಹಿಸಿದ್ದಾರೆ. ಕೆರೆ ಸಂಪೂರ್ಣ ತುಂಬಿದೆ. ಮಾತ್ರವಲ್ಲದೆ, “ನೀರು ತರಲು ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದ ವಾರ್ಡನ್, ವಿದ್ಯಾರ್ಥಿಗಳನ್ನು ದನಗಳನ್ನು ಓಡಿಸುವ ಹಾಗೆ, ಬೆತ್ತ ಹಿಡಿದು ಓಡಿಸುತ್ತಿದ್ದರು” ಎಂದು ಶಶಿಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮಳೆಯಿಂದಾಗಿ ಕೆರೆಯ ದಡ ಕೂಡ ಪಸಿಯಾಗಿದೆ. ಮಕ್ಕಳು ಕೆರೆ ಬಳಿ ಹೋದಾಗ, ಕಾಲು ಜಾರಿ ಬಿದ್ದು, ಏನಾದರೂ ಅನಾಹುತ ಸಂಭವಿಸಿದರೆ, ಯಾರು ಹೊಣೆ. ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಾಗುವ ಸಂಭವವನ್ನೂ ಯೋಚಿಸದೆ, ವಿದ್ಯಾರ್ಥಿಗಳನ್ನು ನೀರು ತರಳು ಕಳುಹಿಸಿದ್ದ ಪ್ರಾಂಶುಪಾಲರು, ವಾರ್ಡನ್, ಸೆಕ್ಯುರಿಟಿ, ಶಾಲಾ ಅಟೆಂಡರ್‌ಅನ್ನು ಸೇವೆಯಿಂದ ಅಮಾನತು ಮಾಡಬೇಕು. ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.