ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೆಕೆರೆ ಪೂರ್ಣ ಚಂದ್ರ ತೇಜಸ್ವಿ ಬಯಲು ರಂಗ ಮಂದಿರದಲ್ಲಿ ಮಾರ್ಚ್ 8ರ ಶನಿವಾರದಂದು ಸಂಜೆ 5 ಗಂಟೆಗೆ ಎಸ್ ಕೆ ಕರೀಂಖಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ಸಂಸ್ಥಾಪಕ ಮತ್ತು ಹಿರಿಯ ರಂಗಕರ್ಮಿ ನಿರ್ದೇಶಕ ಪ್ರಸಾದ್ ರಕ್ಷಿದಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, “ಸಕಲೇಶಪುರ ತಾಲೂಕಿನ ಹೆಮ್ಮೆಯ ಪುತ್ರ, ಮಹಾನ್ ಮಾನವತಾವಾದಿ, ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿದ ಎಸ್ ಕೆ ಕರೀಂಖಾನ್ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿ ಕರ್ನಾಟಕದ ಹಿರಿಯ ಜನಪರ ಧೀಮಂತರೊಬ್ಬರಿಗೆ ಅದನ್ನು ನೀಡಿ ಗೌರವಿಸುವ ಉದ್ದೇಶವನ್ನು ಹೊಂದಿದ್ದೇವೆ” ಎಂದು ತಿಳಿಸಿದರು.
“ಈ ನಿಟ್ಟಿನಲ್ಲಿ ಮಾರ್ಚ್ 8ರಂದು ಲಂಕೇಶ್ ಅವರ ಜನ್ಮದಿನಾಚರಣೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ನಂತರ ಲಂಕೇಶ್ ವಿರಚಿತ ನಾಟಕ ಪ್ರದರ್ಶನವಿದೆ” ಎಂದರು.
“ಜೈ ಕರ್ನಾಟಕ ಸಂಘವು ರಕ್ಷಿದಿಯಂತಹ ಮಲೆನಾಡಿನ ಅತಿ ಸಣ್ಣ ಹಳ್ಳಿಯಲ್ಲಿ ‘ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರ’ವನ್ನು ಸ್ಥಾಪಿಸಿ ಕಳೆದ ನಲವತ್ತಾರು ವರ್ಷಗಳಿಂದ ನಿರಂತರವಾಗಿ ರಂಗ ಚಟುವಟಿಕೆಯೂ ಸೇರಿದಂತೆ ಸಾಂಸ್ಕೃತಿಕವಾಗಿ ರಂಗಭೂಮಿ, ಕಲೆ, ಸಾಹಿತ್ಯ, ಆರೋಗ್ಯ, ಸಾಕ್ಷರತೆ, ಕೃಷಿ, ಪರಿಸರ ಸಂರಕ್ಷಣೆಯಂತಹ ಕಾಯಕಗಳ ಜತೆಗೆ ಜನಪರ ಹೋರಾಟಗಳನ್ನೂ ರೂಪಿಸುತ್ತ ಬಹುಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವ ಸಂಸ್ಥೆಯಾಗಿದೆ” ಎಂದು ಹೇಳಿದರು.
ತನ್ವೀರ್ ಅಹಮದ್ ಮಾತನಾಡಿ, “ನಮ್ಮ ಸ್ವಂತ ತಾತನ ಅಣ್ಣನಾಗಿದ್ದು, 2006ರಲ್ಲಿ ಮೃತರಾದರು. ಸಕಲೇಶಪುರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾನೆ ಸಂತೋಷವಾಗಿದೆ. ಅನೇಕ ವರ್ಷದಿಂದ ನನ್ನ ಮಿತಿಯಲ್ಲಿ ಅವರ ಬಗ್ಗೆ ಸಂಗ್ರಹಿಸುತ್ತಿದ್ದೆನು. ಅವರ ನೆನಪುಗಳು ನಮ್ಮ ಜತೆ ಇದೆ. ಅವರ ಬಗ್ಗೆ ರಿಸರ್ಚ್ ಆಗಿ ಇನ್ನಷ್ಟು ಅವರ ಬಗ್ಗೆ ಪುಸ್ತಕಗಳು ಬರಬೇಕು” ಎಂದರು.
ನಮ್ಮ ಹಾಸನ ಮುಖ್ಯಸ್ಥ ತೋಫಿಕ್ ಅಹಮದ್ ಮಾತನಾಡಿ, “ಪ್ರಮುಖವಾಗಿ ನಟವರ ಗಂಗಾಧರ ಎನ್ನುವ ಹಾಡು ಇಂದಿಗೂ ಕೂಡ ಪ್ರಚಲಿತವಾಗಿದೆ. ಎಸ್ ಕೆ ಕರೀಂಖಾನ್ ಅವರ ಪುಸ್ತಕವನ್ನು ಕಾರ್ಯಕ್ರಮಕ್ಕೆ ಭಾಗವಹಿಸುವ ಎಲ್ಲ ಅತಿಥಿಗಳಿಗೆ ಕೊಡಲಾಗುವುದು. ಮಾರಾಟಕ್ಕೆ ಇಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಬಿಜಾಡಿ ಸಮುದ್ರತೀರ ಮೇಘರಾಜ್ ಶವ ಪತ್ತೆ ಅನುಮಾನಾಸ್ಪದ – ಕೋಟ ನಾಗೇಂದ್ರ ಪುತ್ರನ್
ಬನವಾಸೆ ಮಂಜು ಮಾತನಾಡಿ, “ಬೆಳ್ಳಕೆರೆ ಥಿಯೇಟರ್ ಮುಂದೆ ಐತಿಹಾಸಿಕ ಸ್ಥಳವಾಗಿ ಮಾರ್ಪಡಲಿದೆ. ಮುಂದಿನ ಪೀಳಿಗೆಗೆ ಮಲೆನಾಡಿನ ಚಿಕ್ಕ ಹಳ್ಳಿಯಲ್ಲಿ ಇಂತಹ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿವೆ. ಕ್ರಿಯಾಶೀಲವ್ಯಕ್ತಿ ಪ್ರಸಾದ್ ರಕ್ಷಿದಿ ಜೊತೆ ಇದ್ದೇವೆ. ಅವರ ಹೆಸರಿನಲ್ಲಿ ಈ ಪ್ರಶಸ್ತಿ ಕೊಡುತ್ತಿರುವುದು ಉತ್ತಮವಾಗಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಂಗ ಕಲಾವಿದೆ ರಾಧ, ಭೀಮ ವಿಜಯ ಸಂಪಾದಕ ನಾಗರಾಜ ಹೆತ್ತೂರು, ಕನ್ನಡ ಪೋಸ್ಟ್ ಸಂಪಾದಕ ಮಂಜು ಬನವಾಸೆ, ತನ್ವೀರ್ ಅಹಮದ್, ನಮ್ಮ ಹಾಸನ್ ಮುಖ್ಯಸ್ಥ ತೌಫಿಕ್ ಅಹಮ್ಮದ್ ಸೇರಿದಂತೆ ಇತರರು ಇದ್ದರು.