ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಲಂಚ ಕೊಡಲಿಲ್ಲವೆಂದರೆ, ಒಂದೆರಡು ದಿನ ಆಗುವ ಕೆಲಸಗಳಿಗೆ ತಿಂಗಳಾದ್ಯಂತ ಕಚೇರಿಗೆ ಅಲೆಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕಚೇರಿಯಲ್ಲಿ ಸಾರ್ವಜನಿಕರಿಗೆ ಸರಿಯಾದ ವ್ಯವಸ್ಥೆಗಳಿಲ್ಲ. ಮೂಲ ಸೌಕರ್ಯಗಳಿಲ್ಲ. ಕಚೇರಿಗೆ ಬರುವ ಮಂದಿಗೆ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಹಳ್ಳಿಗಳಿಂದ ರೈತರು, ಕೂಲಿ ಕಾರ್ಮಿಕರು ತಮ್ಮ ಕೆಲಸಗಳನ್ನು ಬಿಟ್ಟು ಬಂದು, ದಿನವಿಡೀ ಕಚೇರಿಯಲ್ಲಿ ಕಾದು ಕುಳಿತರೂ, ಕೆಲಸಗಳಾಗುವುದಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಚೇರಿಯಲ್ಲಿ ವಿಶೇಷ ಚೇತನರು ಬಂದರೂ ಅವರಿಗೆ ಆಧ್ಯತೆ ನೀಡದೆ, ಸರತಿ ಸಾಲಿನಲ್ಲಿ ನಿಲ್ಲಿಸುತ್ತಾರೆ. ಮೆಟ್ಟಿಲುಗಳನ್ನು ಏರಲು ಆಗದೇ ಇರುವವರಿಗೆ ಪರ್ಯಾಯ ವ್ಯವಸ್ಥೆ (ಲಿಫ್ಟ್) ಇಲ್ಲ. ಸಮಯ ಆಗದಿದ್ದರೂ ರೆಕಾರ್ಡ್ ರೂಮ್ ಬಾಗಿಲನ್ನು ಮುಚ್ಚುತ್ತಾರೆ” ಎಂದು ತಾಲೂಕಿನ ನಿವಾಸಿ ಪ್ರಭಾಕರ್ ಆರೋಪಿಸಿದ್ದಾರೆ.
“ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಬಡ ಜನರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ” ಎಂದು ಅವರು ಕಿಡಿಕಾರಿದ್ದಾರೆ.