ಕಾಡಾನೆಗಳಿವೆ ಎಂದು ಎಚ್ಚರಿಕೆ ನೀಡಿದ ಇಟಿಎಫ್ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ಬೇಲೂರು ತಾಲೂಕಿನ ಬಿಕ್ಕೋಡು-ಕೆಸಗೋಡು ರಸ್ತೆಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಡಿಸೆಂಬರ್ 15ರವರೆಗೆ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮತ್ತು ಕಾಡಾನೆಗಳ ಸ್ಥಳಾಂತರ ಕಾರ್ಯಾಚರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಾಡಾನೆಗಳಿವೆ ರಸ್ತೆಯಲ್ಲಿ ಓಡಾಡಬೇಡಿ ಎಂದು ಸ್ಥಳೀಯರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಇದಕ್ಕೆ ಕೋಪಗೊಂಡ ಗ್ರಾಮಸ್ಥರು ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆಯ ಜೀಪಿನ ಚಕ್ರದ ಗಾಳಿ ತೆಗೆಯಲೂ ಜನರು ಮುಂದಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೊಂದೆಡೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಿಂಡಾನೆಗಳು ಪರೇಡ್ ನಡೆಸಿದ ಘಟನೆ ನಡೆಯಿತು. ಗುಂಪು ಗುಂಪಾಗಿ ಕಾಫಿ ತೋಟದಿಂದ ತೋಟಕ್ಕೆ 35ಕ್ಕೂ ಹೆಚ್ಚು ಆನೆಗಳು ಅಲೆದಾಡುತ್ತಿರುವುದು ಕಂಡುಬಂದಿದೆ. ಇದರಲ್ಲಿ ಮರಿಯಾನೆಗಳೇ ಹೆಚ್ಚಾಗಿರುವುದು ಕಂಡುಬಂದಿದೆ. ಆದ್ದರಿಂದ ಈ ಪ್ರದೇಶದ ಸುತ್ತ-ಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.