ಕುರಿ ಮೇಯಿಸಲು ಹೋದಾ ವೃದ್ಧೆಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಡಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕುರಿ ಮೇಯಿಸಲು ಜಮೀನಿನ ಬಳಿ ಹೋಗಿದ್ದ ಒಂಟಿ ವೃದ್ಧೆ ಸುಶೀಲಮ್ಮ(60) ಅವರ ಪ್ರಾಣ ತೆಗೆದು ಹೊಂಡದಲ್ಲಿ ಮುಳುಗಿಸಿ ಚಿನ್ನಾಭರಣ ದೋಚಿರುವ ಪಾತಕಿಗಳು ಪರಾರಿಯಾಗಿದ್ದಾರೆ. ಹಾಡಹಗಲಿನಲ್ಲೇ ನಡೆದ ಅಮಾನುಷ ಹತ್ಯೆಗೆ ಊರಿಗೆ ಊರೇ ಬೆಚ್ಚಿಬಿದ್ದಿದೆ. ಕೊಲೆಗಡುಕರ ಬಂಧನಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವೃದ್ಧೆಯ ಮೈಮೇಲಿದ್ದ 80 ಗ್ರಾಂ ಚಿನ್ನಕ್ಕಾಗಿ ಆಕೆಯನ್ನು ಕೊಂದಿರುವ ದುಷ್ಕರ್ಮಿಗಳು ಅಲ್ಲೇ ಇದ್ದ ನೀರಿನ ತೊರೆಗೆ ಮೃತದೇಹ ಬಿಸಾಕಿದ್ದಾರೆ. ಮೃತದೇಹದ ಮೇಲೆ ದೊಡ್ಡ ಮರದ ದಿಮ್ಮಿಯನ್ನು ಹೇರಿ ಹೋಗಿದ್ದಾರೆ.
ಸೋಮವಾರ ಮಧ್ಯಾಹ್ನ ತನ್ನ ಕುರಿಗಳನ್ನ ಮೇಯಿಸಲೆಂದು ಮನೆಯಿಂದ ಹೊರ ಹೋಗಿದ್ದ ಗ್ರಾಮದ ಸುಶೀಲಮ್ಮ ಸಂಜೆಯಾದರೂ ಮನೆಗೆ ಹಿಂದಿರುಗಲಿಲ್ಲ. ಕುರಿಗಳು ಮನೆಗೆ ಬಂದರೂ ವೃದ್ಧೆಯ ಸುಳಿವು ಇಲ್ಲದನ್ನು ಕಂಡ ಮನೆಯವರು ಸುತ್ತಮುತ್ತಲೆಲ್ಲಾ ಹುಡುಕಾಡಿದ್ದಾರೆ. ಆಕೆಯ ಫೋನ್‌ಗೆ ಕರೆ ಮಾಡಿದರೂ ಫೋನ್ ಸ್ವಿಚ್ ಆಫ್ ಆಗಿದೆ. ಎಲ್ಲಿ ಹುಡುಕಾಡಿದ್ರು ಆಕೆಯ ಸುಳಿವು ಸಿಕ್ಕಿಲ್ಲ. ಕೂಡಲೇ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು, ಎಲ್ಲಿಯಾದರೂ ಹೋಗಿರಬಹುದೆಂಬ ಅನುಮಾನದಿಂದ ಬೆಳಿಗ್ಗೆಯವರೆಗೂ ಸುಮ್ಮನಿದ್ದಾರೆ.
ಮರು ದಿನ ಬೆಳಿಗ್ಗೆ ಮತ್ತೆ ಸುಶೀಲಮ್ಮಳನ್ನು ಹುಡುಕಿ ಹೊರಟ ಕುಟುಂಬ ಸದಸ್ಯರಿಗೆ ಘನ ಘೋರ ದೃಶ್ಯ ಕಂಡಿದ್ದು, ಆಕೆ ಕುರಿ ಮೇಯಿಸಲು ಹೋಗಿದ್ದ ಪ್ರದೇಶದಲ್ಲಿರೋ ತೊರೆಯ ನೀರಿನಲ್ಲಿ ಮರದ ದಿಮ್ಮಿಯ ಕೆಳಗೆ ಸುಶೀಲಮ್ಮನ ಮೃತದೇಹ ಕಾಣಿಸಿದೆ. ಆಕೆಯ ಮೈಮೇಲಿದ್ದ ಚಿನ್ನದ ಸರ, ಚಿನ್ನದ ಬಳೆ, ಓಲೆ ಎಲ್ಲವೂ ಮಾಯವಾಗಿವೆ. ಚಿನ್ನಾಭರಣಕ್ಕಾಗಿಯೇ ಸುಶೀಲಮ್ಮರನ್ನು ಹಿಂಬಾಲಿಸಿರುವ ಪಾತಕಿಗಳು ಆಕೆಯನ್ನು ಕೊಂದು ಚಿನ್ನಾಭರಣ ದೋಚಿದ್ದಾರೆಂದು ಮೃತರ ಸಂಬಂಧಿ ಮೋಹನ್ ಅವಲತ್ತುಕೊಂಡಿದ್ದಾರೆ.
ವೃದ್ಧೆಯ ಮೈಮೇಲೆ ಚಿನ್ನಾಭರಣ ಗಮನಿಸಿದ ಪಾತಕಿಗಳು ಆಕೆಯನ್ನು ಹಿಂಬಾಲಿಸಿ ಹತ್ಯೆ ಮಾಡಿರಬಹುದು ಎನ್ನೊ ಶಂಕೆ ವ್ಯಕ್ತವಾಗಿದ್ದು, ಯಾರೋ ಗುರುತು ಪರಿಚಯ ಇರುವವರೇ ಈಕೆಯನ್ನು ಟಾರ್ಗೆಟ್ ಮಾಡಿರಬಹುದೆಂಬ ಅನುಮಾನ ಮೂಡಿದೆ.
ವೃದ್ಧೆ ಕೊಲೆ ನಡೆದಿರುವ ವಿಚಾರ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಬಂದ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು, ಶ್ವಾನ ದಳ, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಮೂಲಕ ಪರಿಶೀಲನೆ ನಡೆಸಿದ್ದಾರೆ. ಹಾಸನದ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ವೃದ್ಧೆಯ ಸಾವು ಊರಿಗೆ ಊರನ್ನೆ ಬೆಚ್ಚಿಬೀಳಿಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಆರೋಪಿಗಳ ಬಂಧನದ ಬಳಿಕ ಕೊಲೆ ಹಿಂದಿನ ಸತ್ಯಾಸತ್ಯತೆಗಳು ಬಯಲಾಗಲಿವೆ.