ಡಾ. ಬಿ ಆರ್ ಅಂಬೇಡ್ಕರ್ ಅವರು ಮಹಿಳಾ ವಿಮೋಚಕ ಎಂದರೆ ತಪ್ಪಾಗಲಾರದು. ಭಾರತದ ಮಹಿಳೆಯರಿಗೆ ಇವರ ಕೊಡುಗೆ ಅಪಾರ. ಹಾಗೆಯೇ ಇಂದು ಕಾರ್ಮಿಕರಿಗೆ ಕೂಲಿ ಸಿಗುತ್ತಿದೆಯೆಂದರೆ ಅದು ಡಾ.ಅಂಬೇಡ್ಕರ್ ಅವರಿಂದ ಮಾತ್ರ ಎಂದು ಅಕ್ಕಾ ಅಕಾಡೆಮಿಯ ಡಾ. ಶಿವಕುಮಾರ್ ಸ್ಮರಿಸಿದರು.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಯಲಹಂಕ ದೇವಿಹಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ ಹಮ್ಮಿಕೊಂಡಿದ್ದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಗ್ರಾಮದ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಡಾ. ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ಪ್ರಾಶ್ನಾಳಿಯೊಂದೆಗೆ ತಮ್ಮ ಮಾತನ್ನು ಆರಂಭಿಸಿ, “ದೇವಿಹಳ್ಳಿ ಗ್ರಾಮದದಲ್ಲಿ ಡಾ. ಅಂಬೇಡ್ಕರ್ ಅವರ ಸ್ಮರಣೆಯ ಮಾಡುತ್ತಿರುವುದು ಸಂತೋಷದ ಸಂಗತಿ. ಆದರೆ ಅವರನ್ನು ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ ಎಂಬುದೇ ನನ್ನ ಪ್ರಶ್ನೆಯಾಗಿದೆ. ಈಗಲೂ ನಮ್ಮ ಮನೆಗಳಲ್ಲಿ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ನಾವು ಶಿಕ್ಷಣ ಕೊಡಿಸುತ್ತಿಲ್ಲ. ಮಕ್ಕಳಿಗೂ ಶಿಕ್ಷಣದಿಂದ ದೂರ ಇಡುವಂತಹ ಪ್ರಯತ್ನ ಮಾಡುತ್ತಿರುವುದು ಅತ್ಯಂತ ದುಃಖದ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದರು.
“ಅಂಬೇಡ್ಕರ್ ಬಗ್ಗೆ ಹೇಳುತ್ತ ಹೋದರೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ನಾವುಗಳೂ ಕೂಡ ನಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಗೆ ಸಂವಿಧಾನವನ್ನು ಅರ್ಥ ಮಾಡಿಸುವುದು ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ದಾರಿಗಳ ಬಗ್ಗೆ ಅರಿವು ಮೂಡಿಸಿ ಮಕ್ಕಳನ್ನು ಶಿಕದಷಿತರನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ದಲಿತ ಮುಖಂಡ ಹೆಚ್ ಕೆ ಸಂದೇಶ್ ಮಾತನಾಡಿ, “ದೇಶದ ಪ್ರತಿಯೊಬ್ಬರೂ ಬಾಬಾ ಸಾಹೇಬರು ನೀಡಿದ ಸಂವಿಧಾನದ ಆಶ್ರಯದಲ್ಲಿಯೇ ಬದುಕು ನಡೆಸುವ ಜತೆಗೆ ಸರ್ಕಾರದಿಂದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಬಾಬಾ ಸಾಹೇಬರ ಜಯಂತಿಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ಆಚರಿಸುವಂತಾಗಬಾರದು” ಎಂದರು.
“ಶೋಷಣೆ, ಅಸಮಾನತೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡಿ ನೊಂದವರು, ಬಡವರು, ಅಸ್ಪಶ್ಯರು, ಮಹಿಳೆಯರು, ಕಾರ್ಮಿಕರ ಪರವಾಗಿ ನ್ಯಾಯ ಒದಗಿಸಿಕೊಡಲು ಶ್ರಮಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲಬೇಕು. ತಾವು ಓದಿದ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದ ಜ್ಞಾನಭಂಡಾರ ಅಂಬೇಡ್ಕರ್ ಅವರದು” ಎಂದು ಬಣ್ಣಿಸಿದರು.
“ಭಾರತ ಬೆಳೆಯುತ್ತಿದ್ದರೂ ಎಲ್ಲ ವರ್ಗಗಳನ್ನು ಒಟ್ಟಾಗಿ ಕೊಂಡೊಯ್ಯುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯವಾಗದಿದ್ದರೆ ಶ್ರೀಮಂತರ ಬೆಳವಣಿಗೆಯಾಗುತ್ತದೆಯೇ ಹೊರತು ಬಡವರ ಭಾರತವಾಗುವುದಿಲ್ಲ. ಆ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಆಶಯದಂತೆ ಭಾರತ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕು” ಎಂದು ಸಲಹೆ ನೀಡಿದ ಅವರು, ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಹವಾಮಾನ ವೈಪರೀತ್ಯ | ರಾಜ್ಯದ ಹಲವೆಡೆ ಭಾರೀ ಮಳೆ; ಬೆಳೆಹಾನಿಯಿಂದ ಕಂಗಾಲಾದ ರೈತರು
ಕಾರ್ಯಕ್ರಮದಲ್ಲಿ ಶಾಸಕ ಎಚ್ ಕೆ ಸುರೇಶ್, ಮಾಜಿ ಅದ್ಯಕ್ಷ ಎಂ ಆರ್ ವೆಂಕಟೇಶ್, ಡಿಜೆ ಬ್ರಹ್ಮೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಆಶಾ ಶಾಂತಯ್ಯ, ಹರೀಶ್, ಮಂಜುಳಾ ಸುನಿಲ್ ಕುಮಾರ್, ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಬಳಗದವರು ಹಾಗೂ ದೇವಿಹಳ್ಳಿ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.