ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬೆಟ್ಟದ ಸಾತೇನಹಳ್ಳಿಯಲ್ಲಿ ವಾಸಿಸುತ್ತಿರುವ ಅಲೆಮಾರಿ ಸುಡುಗಾಡುಸಿದ್ದ ಸಮುದಾಯದ ಕುಟುಂಬಗಳ ಮೇಲೆ ಸವರ್ಣೀಯರು ದೌರ್ಜನ್ಯ ಎಸಗುತ್ತಿದ್ದಾರೆ. ಆ ಕುಟುಂಬಗಳಿಗೆ ರಕ್ಷಣೆ ನೀಡಿ, ಮೂಲ ಸೌಕರ್ಯಗಳನ್ನು ಒದಗಿಸಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಒತ್ತಾಯಿಸಿದೆ.
ಕಳೆದ 18 ವರ್ಷಗಳಿಂದ ಸುಡುಗಾಡುಸಿದ್ದ ಸಮುದಾಯದ ಕುಟುಂಬಗಳು ಬೆಟ್ಟದ ಸಾತೇನಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಮೇಲೆ ಕಳೆದ 10 ವರ್ಷಗಳಿಂದ ನಿರಂತರ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಕಳೆದ ತಿಂಗಳು (2024ರ ಜನವರಿ), ಸಮುದಾಯದ ಮೂವರ ಮೇಲೆ ಸವರ್ಣೀಯರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಮುದಾಯದ ಮಂಜುಳ ಎಂಬವರು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಐವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜನವರಿ 28ರಂದು ಪ್ರಬಲ ಜಾತಿಯ ಡ್ರೈವರ್ ತುಂಗಾ ಎಂಬಾತ ತನ್ನ ಟ್ರ್ಯಾಕ್ಟರ್‌ನಿಂದ ಸುಡುಗಾಡುಸಿದ್ದ ಸಮುದಾಯದ ರಾಮಚಂದ್ರ ಎಂಬವರ ಬೈಕ್‌ಗೆ ಢಿಕ್ಕಿ ಹೊಡೆದಿದ್ದ. ಘಟನೆ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡದಂತೆ ತುಂಗಾ ಸೇರಿದಂತೆ ಐವರು ಪ್ರಬಲ ಜಾತಿಯವರು ರಾಮಚಂದ್ರ-ಮಂಜುಳ ಅವರ ಮನೆಯ ಬಳಿ ಹೋಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಘಟನೆ ಬಗ್ಗೆ ದೂರು ನೀಡಿರುವ ಮಂಜುಳ, “ನಮ್ಮ ಮನೆ ಬಳಿ ಬಂದಿದ್ದ ಪ್ರಬಲ ಜಾತಿ ಐವರು ನಮಗೆ ಬೆದರಿಕೆ ಹಾಕಿದ್ದಾರೆ. ಅಪಘಾತ ಸಂಬಂಧ ದೂರು ನೀಡಿದರೆ, ನಿಮ್ಮನ್ನು ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ತನ್ನನ್ನು ಎಳೆದಾಡಿ, ನೆಲಕ್ಕೆ ಬೀಳಿಸಿ ಹಲ್ಲೆ ಮಾಡಿದ್ದಾರೆ. ತನ್ನ ಪತಿ ರಾಮಚಂದ್ರ ಮತ್ತು ಸಮುದಾಯದ ಮಂಜಣ್ಣ ಮೇಲೂ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ಗುಡಿಸಲುಗಳಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.
ಮಂಜುಳ ಅವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಡ್ರೈವರ್ ತುಂಗಾ, ಮಹೇಶ, ಅಶೋಕ, ನಾಗೇಶ ಮತ್ತು ಮತ್ತೊಬ್ಬ ಮಹೇಶ ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 354, 324, 323, 504, 506, 149 ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಲೆಮಾರಿ ಬುಡಕಟ್ಟು ಮಹಾಸಭಾಕ್ಕೆ ಪತ್ರ
ಗ್ರಾಮದಲ್ಲಿ ಸುಡುಗಾಡುಸಿದ್ದ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಲೆಮಾರಿ ಬುಡಕಟ್ಟು ಮಹಾಸಭಾಕ್ಕೆ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಹನುಮಂತ ಬಿ.ಎಲ್ ಪತ್ರ ಬರೆದಿದ್ದಾರೆ. “ಬೆಟ್ಟದ ಸಾತೇನಹಳ್ಳಿ ಗ್ರಾಮದಲ್ಲಿ ಸುಮಾರು 18 ವರ್ಷಗಳಿಂದ ವಾಸ ಮಾಡುತ್ತಿರುವ 12 ಸುಡುಗಾಡುಸಿದ್ದ ಕುಟುಂಬಗಳ ಮೇಲೆ ಬೆಟ್ಟದ ಸಾತೇನಹಳ್ಳಿಯ ಕೆಲ ಜಾತಿವಾದಿ, ಸವರ್ಣಿಯರು ದೌರ್ಜನ್ಯ ಎಸಗುತ್ತಿದ್ದಾರೆ. ಈ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಸರ್ಕಾರ 2020ರಲ್ಲಿ ಅರ್ಧ ಎಕರೆ ಜಾಗ ಮಂಜೂರು ಮಾಡಿದೆ. ಆದರೆ, ಇದುವರೆಗೂ ಅವರಿಗೆ ಮೂಲ ಸೌಕರ್ಯಗಳನ್ನು ನೀಡದಂತೆ ಕೆಲ ರಾಜಕೀಯ ವ್ಯಕ್ತಿಗಳು ತಡೆದಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಜಾತಿ ದೌರ್ಜನ್ಯ | ದಲಿತ ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಚಹಾ ಕೊಟ್ಟ ಸವರ್ಣೀಯರು
“ಈ ಕುಟುಂಬಗಳನ್ನು ಗ್ರಾಮದಿಂದ ಖಾಲಿ ಮಾಡಿಸಲು ಗ್ರಾಮದ ಸವರ್ಣೀಯರು ಯತ್ನಿಸುತ್ತಿದ್ದಾರೆ. ಇದಕ್ಕೆ, ರಾಜಕೀಯ ಪ್ರಭಾವಿಗಳ ಬೆಂಬಲವೂ ಇದೆ. ಹೀಗಾಗಿ, ಪದೇ ಪದೇ ಮಹಿಳೆಯರು, ಮಕ್ಕಳು ಏನ್ನದೇ ಸಮುದಾಯದ ಎಲ್ಲರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸಮುದಾಯದ ಜನರನ್ನು ಕಳ್ಳರಂತೆ ನೋಡಲಾಗುತ್ತಿದೆ. ದೌರ್ಜನ್ಯ ಎಸಗುತ್ತಿರುವ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅಲೆಮಾರಿ ಸಮುದಾಯದ ಕುಟುಂಬಗಳಿಗೆ ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.