ಹಾಸನ | ಆರೋಗ್ಯ, ಶಿಕ್ಷಣಕ್ಕಾಗಿ ಹೋರಾಟ ಮಾಡಬೇಕಾದಂತಹ ದುಃಸ್ಥಿತಿ ಬಂದೊದಗಿದೆ: ಸಿಐಟಿಯು ಧರ್ಮೇಶ್

Date:

Advertisements

ಈ ದೇಶದ ಪ್ರತಿಯೊಬ್ಬರೂ ಘನತೆಯಿಂದ ಬದುಕುವುದೇ ನಿಜವಾದ ಸ್ವಾತಂತ್ರ್ಯ. ಡಾ ಬಿ ಆರ್ ಅಂಬೇಡ್ಕರ್ ಅವರು ಎಲ್ಲ ಮನುಷ್ಯರೂ ಕೂಡ ಯಾವುದೇ ರೀತಿಯ ಕೊರತೆಗಳಿಲ್ಲದಂತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಘನತೆಯಿಂದ ಬದುಕಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆಂದು ಅಂದಿನ ಕಾಲದಲ್ಲಿಯೇ ಹೇಳಿದ್ದರು. ಆದರೆ ಪ್ರಸ್ತುತದಲ್ಲಿಯೂ ಕೂಡ ನಮ್ಮ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಹೋರಾಟ ಮಾಡಬೇಕಾದಂತಹ ದುಃಸ್ಥಿತಿ ಬಂದೊದಗಿದೆ ಎಂದು ಸಿಐಟಿಯು ಹಾಸನ ಜಿಲ್ಲಾಧ್ಯಕ್ಷ ಧರ್ಮೇಶ್‌ ಕಳವಳ ವ್ಯಕ್ತಪಡಿಸಿದರು.

ಹಾಸನ ನಗರದ ನೂತನವಾಗಿ ನಿರ್ಮಾಣ ಮಾಡಿರುವ ಆಸ್ಪತ್ರೆ ಕಟ್ಟಡದ ಎದುರು ಜನಪರ ಚಳವಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಇದು ರಾಜ ಪ್ರಭುತ್ವದ ಸರ್ಕಾರ ಅಲ್ಲ. ಪ್ರಜಾಪ್ರಭುತ್ವದ ಸರ್ಕಾರ, ನಾವು ಆಯ್ಕೆ ಮಾಡಿರುವ ಸರ್ಕಾರ. ಹಾಗಾಗಿ ಪ್ರತಿ ನಾಗರಿಕರಿಗೂ ಸರ್ಕಾರ ಮೂಲ ಸೌಲಭ್ಯಗಳನ್ನು ಜನರಿಗೆ ಒದಗಿಸಿದಾಗ ಮಾತ್ರ ನಮಗೆ ನಿಜವಾದ ಸ್ವಾತಂತ್ರಯ ದೊರೆತಂತಾಗುತ್ತದೆ. ಹಾಗಾಗಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚಮಾಡಿ ನಿರ್ಮಿಸಿರುವಂತಹ ಆಸ್ಪತ್ರೆ ಕಟ್ಟಡವನ್ನು ಸುಸಜ್ಜಿತಗೊಳಿಸಿ, ಸೂಕ್ತ ವೈದ್ಯಕೀಯ ಉಪಕರಣಗಳು ಹಾಗೂ ಸಮರ್ಪಕ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇತರೆ ಸಿಬ್ಬಂದಿಗಳನ್ನು ನೇಮಕ ಮಾಡಬೇಕು” ಎಂದು ಒತ್ತಾಯಿಸಿದರು.

Advertisements
WhatsApp Image 2025 08 15 at 5.24.19 PM

“ಪ್ರಸ್ತುತ ದಿನಗಳಲ್ಲಿ ಶಿಕ್ಷಣ, ಅರೋಗ್ಯ, ವಸತಿ ಎಲ್ಲವನ್ನೂ ಸರ್ಕಾರ ಖಾಸಗಿಯವರ ಕೈಗೆ ನೀಡುವ ಮೂಲಕ ಬಡವರನ್ನು ನಿರ್ಲಕ್ಷ್ಯ ಮಾಡಿವೆ‌. ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತೆ ಮಾಡಿರುವಂತ ಸರ್ಕಾರಗಳು ಬಂಡವಾಳಿಗರ ಕೈಯ್ಯಾಳುಗಳಾಗಿವೆ. ಹಾಸನದಲ್ಲಿ ಇತ್ತೀಚಿಗೆ ನಡೆದಂತಹ ಘಟನೆಗಳಿಂದಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಆರೋಗ್ಯ ಸಮಸ್ಯೆಗಳಿವೆ. ಆದರೆ ಪ್ರಸ್ತುತ ಒತ್ತಡದ ಬದುಕಿನ ನಡುವೆ ಆರೋಗ್ಯದೆಡೆ ಗಮನ ಹರಿಸುವಷ್ಟು ಸಮಯವಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಶೀಘ್ರದಲ್ಲಿಯೇ ಉದ್ಘಾಟನೆಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.

“ಸಾವಿರಾರು ರೀತಿಯ ರೋಗಿಗಳು ಬಂದರೂ ಕೂಡ ಸಮರ್ಪಕವಾದ ವೈದ್ಯಕೀಯ ಸಿಬ್ಬಂದಿಗಳಿಲ್ಲ. ಔಷೋಧೋಪಚಾರಗಳಿಲ್ಲ. ಸಾರ್ವಜನಿಕ ಹಣವನ್ನು ವೆಚ್ವ ಮಾಡಿ ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಮಾಡಿ ಜನರಿಗೆ ಅವರ ಆರೋಗ್ಯಕ್ಕೆ ಅನುಕೂಲವಾಗಲಿಲ್ಲವೆಂದರೆ ಏನು ಪ್ರಯೋಜನ. ಹಾಗಾಗಿ ಇದೇ ನಮ್ಮ ಕೊನೆಯ ಹೋರಾಟವಲ್ಲ, ಈ ಮನವಿಗೆ ಸರ್ಕಾರ, ಜಿಲ್ಲಾಡಳಿತ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ನವೀನ್‌ ಕುಮಾರ್‌ ಮಾತನಾಡಿ, ” ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಹಮ್ಮಿಕೊಂಡಿರುವ ಪ್ರಗತಿಪರ ಸಂಘಟನೆಗಳು ಸೇರಿ ಮಾಡುತ್ತಿರುವಲ್ಲಿಗೆ ನೂತನ ಉಸ್ತುವಾರಿ ಸಚಿವರು ಬಂದು ಅಹವಾಲುಗಳನ್ನು ಸ್ವೀಕರಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲದಿರುವುದಾಗಿ ಹಾಗೂ ಮುಂದಿನ ದಿನಗಳಲ್ಲಿ ಬಂದು ಪರಿಶೀಲನೆ ಮಾಡಿ, ಅಹವಾಲುಗಳನ್ನು ಸ್ವೀಕರಿಸುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.

“ಹಾಸನ ಜಿಲ್ಲೆಯಲ್ಲಿ ಕಳೆದ ಒಂದೆರೆಡು ತಿಂಗಳುಗಳಿಂದ ನಡೆಯುತ್ತಿರುವ ಹೃದಯಾಘಾತ ಸಂಬಂಧ ಸೂಕ್ತ ಸಮಯಕ್ಕೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ದೊರೆಯದ ಕಾರಣ ಬಹುತೇಕ ಯುವಜನರು ಪ್ರಾಣ ತೆರಬೇಕಾದ ಪರಿಸ್ಥಿತಿ ಎದುರಾಯಿತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಹಾಸನ ಜಿಲ್ಲೆಯ ಸುತ್ತಮುತ್ತಲಿನ ಐದಾರು ಜಿಲ್ಲೆಯ ಜನರು ಹಿಮ್ಸ್ ಆಸ್ಪತ್ರೆಗೆ ಧಾವಿಸುತ್ತಾರೆ. ಕೇರಳದಲ್ಲಿ ಅಂತರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ನೀಡುವ ಮೂಲಕ ಕೊರೊನಾ ವೇಳೆಯಲ್ಲಿ ಅಲ್ಲಿಯ ಜನರನ್ನು ಉಳಿಸಿಕೊಂಡಿದ್ದಾರೆ. ಅಂತೆಯೇ ನಮ್ಮಲ್ಲಿಯೂ ಕೂಡ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ವ್ಯವಸ್ಥೆ ಸಿಗುವಂತೆ ಮಾಡಿದಾಗ ಮಾತ್ರ ಸಾರ್ವಜನಿಕ ಸೇವೆಗೆ ಅನುಕೂಲವಾಗುತ್ತದೆ” ಎಂದು ಹೇಳಿದರು.

ಹಿರಿಯ ಮುಖಂಡ ರಾಜಶೇಖರ ಮಾತನಾಡಿ, “ಆರೋಗ್ಯ ಮನುಷ್ಯನಿಗೆ ಅತ್ಯಂತ ಅವಶ್ಯಕವಾಗಿದೆ. ನಾವು ಆರೋಗ್ಯವಾಗಿದ್ದರೆ ಬೇರೆ ರೀತಿಯ ಸಮಸ್ಯೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಹೋರಾಡಬಹುದು. 18 ಲಕ್ಷ ಜನಸಂಖ್ಯೆ ಹೊಂದಿರುವ ಹಾಸನ ಜಿಲ್ಲೆಗೆ ಗುಣಮಟ್ಟದ ಆರೋಗ್ಯ ನೀಡುವುದು ಅಗತ್ಯವಾಗಿದೆ. 60 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿದರೆ ಈ ಆಸ್ಪತ್ರೆಗೆ ಮೂಲಸೌಕರ್ಯಗಳನ್ನು ಅಳವಡಿಸುವ ಮೂಲಕ ಜನರಿಗೂ ಅನುಕೂಲ ಮಾಡಿಕೊಡಬಹುದು. ಇದರಿಂದ ಸರ್ಕಾರಕ್ಕೂ ಹೆಸರು ಬರುತ್ತದೆ. ಹಾಗಾಗಿ ಜನರು ಅನಾರೋಗ್ಯದಿಂದ ಸಾವಿಗೆ ತುತ್ತಾಗದಂತೆ ತಡೆಯಲು ಉತ್ತಮ ವೈದ್ಯಕೀಯ ವ್ಯವಸ್ಥೆ ಅನಿವಾರ್ಯವಾಗಿದೆ. ಈಗ ಇರುವ ಕಟ್ಟಡಕ್ಕೆ ವೈದ್ಯಕೀಯ ಉಪಕರಣ ಹಾಗೂ ಅಗತ್ಯ ಸಿಬ್ಬಂದಿಗಳನ್ನು ನೇಮಿಸಬೇಕು” ಎಂದು ಆಗ್ರಹಿಸಿದರು.

ಸಮತಾ ಜಿಲ್ಲಾ ಸಂಚಾಲಕಿ ಮಮತಾ ಶಿವು ಮಾತನಾಡಿ, “ಹಾಸನದಲ್ಲಿ ಉಂಟಾದ ಹೃದಯಾಘಾತಗಳ ಕುರಿತು ಸಂಸತ್‌ನಲ್ಲಿ ಚರ್ಚೆಯಾಗಿದೆ. ಅದಕ್ಕೆ ತಕ್ಕಂತೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಉತ್ತಮ ಗುಣಮಟ್ಟದ ಆರೋಗ್ಯ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು. ಬಹುಸಂಖ್ಯಾತ ಜನಸಂಖ್ಯೆ ಹೊಂದಿರುವ ಹಾಸನ ಜಿಲ್ಲೆಯಲ್ಲಿ ಉನ್ನತ ಆರೋಗ್ಯವನ್ನು ನೀಡಬೇಕು. ಯಾಂದರೆ ಜಿಲ್ಲೆಯಲ್ಲದೆ ಸುತ್ತಮುತ್ತಲಿನ ಇತರೆ ಜಿಲ್ಲೆಗಳವರೂ ಹಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದರಿಂದ ಸುಸಜ್ಜಿತವಾದ ಉಪಕರಣಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಬೇಕು. ಪ್ರತಿಯೊಬ್ಬರಿಗೂ ಕೈಗೆಟುಕುವಂತಹ ಉಚಿತ ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ಮಾಡಬೇಕು” ಎಂದು ಆಗ್ರಹಿಸಿದರು.

ರಾಜೇಶ್‌ ಮಾತನಾಡಿ, “ಸ್ಕ್ಯಾನಿಂಗ್ ಮಾಡಿಬೇಕೆಂದರೆ ತುಂಬಾ ಹೊತ್ತು ಕ್ಯೂ ನಿಲ್ಲಬೇಕಾಗುತ್ತದೆ. ಸಿದ್ದರಾಮಯ್ಯನವರು ಜನಪರ ಮುಖ್ಯಮಂತ್ರಿಗಳೆಂದು ತಿಳಿದು ಅವರನ್ನು ಆಯ್ಕೆ ಮಾಡಿಕೊಂಡೆವು. ಆದರೆ ಅವರು ಜನಪರ ಕೆಲಸಗಳನ್ನು ನಡೆಸುತ್ತಿಲ್ಲ. ಎಲ್ಲ ಸಮುದಾಯಗಳ ಹಿತಾಸಕ್ತಿಗೆ ದುಡಿಯಬೇಕಾಗಿದ್ದವರು. ಈಗ ಯಾವುದೇ ಜನಪರ ಅನುಕೂಲಗಳನ್ನು ಮಾಡಿಕೊಡದಿರುವುದು ಬೇಸರ ತಂದಿದೆ. ಆದಷ್ಟು ಜಿಲ್ಲೆಯ ಜನರಿಗೆ ಸೂಕ್ತ ಆರೋಗ್ಯ ಒದಗಿಸುವತ್ತ ಅನುದಾನ ನೀಡುವ ಮೂಲಕ ಗಮನ ಹರಿಸಬೇಕು” ಎಂದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಮಾತನಾಡಿ, “ಜನಪರ ಚಳವಳಿಗಳ ಒಕ್ಕೂಟದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರ ಆರೋಗ್ಯಕ್ಕಾಗಿ ಸೂಕ್ತ ವ್ಯವಸ್ಥೆ ಒದಗಿಸುವಂತೆ ಆಗ್ರಹಿಸುತ್ತಿದ್ದೇವೆ. ಈ ಹಿಂದೆ ಗಂಧಕೋಟಿಯಲ್ಲಿರುವ ಕಾಲೇಜು ಕಟ್ಟಡಗಳು ಉದ್ಘಾಟನೆಯಾಗದೆ ಇದ್ದಾಗ ಇದೇ ಜನಪರ ಹೋರಾಟವನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಿಕೊಡಲಾಯಿತು. ಇದೇ ರೀತಿ ಬಹುತೇಕ ಕಟ್ಟಡಗಳು ಉದ್ಘಾಟನೆೈಾಗದೆ ಹಾಗೆಯೇ ಉಳಿದುಕೊಂಡಿದ್ದಾಗ ಹೋರಾಟಗಳ ಮೂಲಕವೇ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಯಿತು. ಅದೇ ಪ್ರಕಾರವಾಗಿ ಈಗಲೂ ಕೂಡ ನೂತನ ಆಸ್ಪತ್ರೆ ಕಟ್ಟಡಕ್ಕೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಜನರ ಸೇವೆಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ವಾತಂತ್ರ್ಯ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ : ಅಧೀಕ್ಷಕಿ ಅನಿತಾ ಹಿರೇಮನಿ

“ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಕೂಡ ಶಿಕ್ಷಣ, ವಸತಿ ಮತ್ತು ಆರೋಗ್ಯಕ್ಕಾಗಿ ಬೇಡಿಕೊಳ್ಳುವಂತ ದುಃಸ್ಥಿತಿ ಬಂದು ಒದಗಿದೆ. ಈ ಹೋರಾಟವನ್ನು ಗೆದ್ದೇ ಗೆಲ್ಲುತ್ತೇವೆಂಬ ನಂಬಿಕೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಐಟಿಯು ಪುಷ್ಪ, ಹಿರಿಯ ರಾಜಕಾರಣಿ ಜಯಲಕ್ಷ್ಮಿ ಸೇರಿದಂತೆ ಬಹುತೇಕರು ಮಾತನಾಡಿದರು.

ಈ ವೇಳೆ ಹಿರಿಯ ಪತ್ರಕರ್ತ ಆರ್‌ ಪಿ ವೆಂಕಟೇಶ ಮೂರ್ತಿ, ಸಾಮಾಜಿಕ ಹೋರಾಟಗಾರ್ತಿ ರೂಪಾ ಹಾಸನ, ಹಿರಿಯ ದಲಿತ ಮುಖಂಡ ಎಚ್‌ ಕೆ ಸಂದೇಶ್‌, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಆರ್‌ ವಿಜಯಕುಮಾರ್‌, ಬಿಜಿವಿಎಸ್‌ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಎಸ್‌ಎಪ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್‌ ಹಾಸನ ಸೇರಿದಂತೆ ಬಹುತೇಕರು ನೆರೆದಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X