ಮೂರು ದಿನಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಮಳೆ-ಗಾಳಿಯಿಂದ ಮನೆಯೊಂದು ಕುಸಿದು ಬಿದ್ದಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮಕ್ಕ ಭೇಟಿ ನೀಡಿದ್ದ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಎಂ.ಕೆ ಶಿವಲಿಂಗೇಗೌಡ, 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ.
ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ತಾಲೂಕಿನ ಡಿ.ಎಂ ಕುರ್ಕೆ ಗ್ರಾಮದಲ್ಲಿ ಮನೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ ಮಹಿಳೆ ಗೌರಮ್ಮ ಸಾವನ್ನಪ್ಪಿದ್ದಾರೆ. ಆಕೆಯ ಪತಿ ನಟರಾಜು ಎಂಬುವವರು ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಶಾಸಕ ಶಿವಲಿಂಗೇಗೌಡ ಮತ್ತು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅವರು ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಘಟನೆಯ ಬಗ್ಗೆ ಪರಿಶೀಲಿಸಿದ್ದು, ಪರಿಹಾರದ ಚೆಕ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್, ಸ್ಥಳೀಯ ಮುಖಂಡ ಸುರೇಶ್, ರಮೇಶ್, ಗಿರೀಶ್, ರಾಂಪುರ ಸುರೇಶ್, ಹರೀಶ್, ಪಿಡಿಒ ರಂಗಪ್ಪ, ಕಂದಾಯ ನಿರೀಕ್ಷಕ ಶಾಂತ ಕುಮಾರ್ ಇದ್ದರು..