ಕಾಫಿ ಬೆಳೆಗಾರ ಪಿ. ವಿಶ್ವನಾಥ್ ಅವರಿಗೆ ಬಂದಿದ್ದ ₹1.75 ಲಕ್ಷ ಮೊತ್ತದ ವಿದ್ಯುತ್ ಬಾಕಿಯನ್ನು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮನ್ನಾ ಮಾಡಿದೆ. ಅಲ್ಲದೆ, ವಿಶ್ವನಾಥ್ ಅವರಿಗೆ ₹20 ಸಾವಿರ ಪರಿಹಾರ ನೀಡುವಂತೆ ಜುಲೈ 10ರಂದು ಸೆಸ್ಕಾಂಗೆ ಆದೇಶ ನೀಡಿತ್ತು.
ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಆನುಘಟ್ಟ ಗ್ರಾಮದ ಕಾಫಿ ಪಲ್ಪರ್ ಯಂತ್ರಕ್ಕಾಗಿ ಪಡೆದಿದ್ದ 3 ಫೇಸ್ ವಿದ್ಯುತ್ ಸಂಪರ್ಕಕ್ಕೆ ಪ್ರತಿ ತಿಂಗಳು ಅಂದಾಜು ₹1,500 ವಿದ್ಯುತ್ ಬಿಲ್ ಬರುತ್ತಿತ್ತು. 2020ರ ನವೆಂಬರ್‌ನಲ್ಲಿ ಬರೋಬ್ಬರಿ ₹1,75,858 ವಿದ್ಯುತ್ ಬಿಲ್ ಬಂದಿದ್ದು, ಇದರಿಂದ ಆಘಾತಗೊಂಡ ವಿಶ್ವನಾಥ್ ಅವರು ಬಿಲ್ ಹಾಗೂ ಮೀಟರ್ ಅನ್ನು ಪುನಃ ಪರಿಶೀಲಿಸಲು ತಿಳಿಸಿದ್ದರು. ಆದರೆ ಎಲ್ಲವೂ ಸರಿಯಾಗಿಯೇ ಇದೆ. ನೀವು ಬಿಲ್‌ನ ಮೊತ್ತ ಕಟ್ಟಲೇಬೇಕೆಂದು ಮೀಟರ್ ರೀಡರ್ ಹೇಳಿದ್ದರು.
ನಂತರ ತಾಲೂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಲ್ಲಿಯೂ ಎಲ್ಲವೂ ಸರಿಯಾಗಿಯೇ ಇದೆ. ನೀವು ಒಮ್ಮೆಲೆ ಅಥವಾ ಕಂತಿನ ಪ್ರಕಾರ ಕಟ್ಟಿ ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕುಲಶಾಸ್ತ್ರ ಅಧ್ಯಯನ ವರದಿ; ಯಥಾವತ್ ಜಾರಿಗೆ ಕುಂಚಿಟಿಗರ ಆಗ್ರಹ
ಕೆಲವು ದಿನಗಳ ನಂತರ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದಾವೆ ಹೂಡಿದ ವಿಶ್ವನಾಥ್, ವಕೀಲರ ನೇಮಕ ಮಾಡದೇ ತಾವೇ ವಾದ ಮಂಡಿಸಿದರು. ಅಗತ್ಯ ದಾಖಲೆಗಳನ್ನು ಒದಗಿಸಿ, ಸತತ 30 ತಿಂಗಳು ಹೋರಾಟ ನಡೆಸಿದ್ದಾರೆ.
“ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಇದೀಗ ₹1,75,858ರಷ್ಟು ಬಿಲ್‌ನ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡಿದ್ದು, ವಿದ್ಯುತ್ ಇಲಾಖೆಯಿಂದ ಸೇವಾ ಲೋಪಕ್ಕಾಗಿ ₹ 10,000 ಮತ್ತು ದಾವೆ ಹೂಡಿದ ವೆಚ್ಚ ಹಾಗೂ ಆನುಭವಿಸಿದ ಮಾನಸಿಕ ವೇದನೆಗಾಗಿ ₹10,000 ಸೇರಿದಂತೆ ಒಟ್ಟಾರೆ ₹ 20,000 ಮೊತ್ತವನ್ನು ಮುಂದಿನ 45 ದಿನದೊಳಗೆ ನೀಡಲು ಆದೇಶ ಹೊರಡಿಸಿದೆ” ಎಂದು ಸಂತ್ರಸ್ತ ಗ್ರಾಹಕ ಪಿ ವಿಶ್ವನಾಥ್ ತಿಳಿಸಿದ್ದಾರೆ.