ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ನಾಗೇಂದ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ ದೊಂಬರಾಟ ಆಡುತ್ತಿದೆ. ಆರೋಪ ಬಂದ ತಕ್ಷಣ ಯಾರೂ ಅಪರಾಧಿಗಳಾಗುವುದಿಲ್ಲ. ಆರೋಪ ಸಾಬೀತಾದ ಬಳಿಕ ನ್ಯಾಯಾಂಗ ಮತ್ತು ಸಂವಿಧಾನದ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅದನ್ನ ಬಿಟ್ಟು ನಾಗೇಂದ್ರ ಅವರ ರಾಜೀನಾಮೆ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಲಾಭಕ್ಕಾಗಿ ಎಂದು ತಿಳಿಸಿದರು.
ಬಿಜೆಪಿ ರಾಜಕೀಯ ಪ್ರತಿಷ್ಠೆಗಾಗಿ ಸದನದ ಕಲಾಪವನ್ನು ಹಾಳು ಮಾಡಿದೆ. ಹತ್ತು ದಿನಗಳ ಕಾಲ ಬರಗಾಲದ ಬಗ್ಗೆ ಚರ್ಚೆ ನಡೆಸದೆ, ನಾಗೇಂದ್ರ ವಿಚಾರ ಮುಂದಿಟ್ಟುಕೊಂಡು ಕ್ಷುಲ್ಲಕ ರಾಜಕಾರಣ ಮಾಡಲಾಗಿದೆ. ನಾವು ಜಿಲ್ಲೆ ಸುತ್ತಾಡಿ ಬರ ಪರಿಸ್ಥಿತಿಯ ವರದಿ ಪಡೆದು ವಿಧಾನಸಭೆಯಲ್ಲಿ ಚರ್ಚಿಸಿ ರೈತರಿಗೆ ಪರಿಹಾರ ನೀಡುವ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಆದರೆ ಬಿಜೆಪಿ ರಾಜಕೀಯ ದೊಂಬರಾಟ ಮಾಡುತ್ತಿದೆ, ಯಾವುದೇ ಚರ್ಚೆಗೆ ಅವಕಾಶ ನೀಡಲಿಲ್ಲ. ಹೊಲಕ್ಕೆ ಹೋಗಿ ತೆನೆ ತೋರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಂತಹ ರಾಜಕೀಯ ನಾಟಕವನ್ನು ಕರ್ನಾಟಕದ ಜನರು ನಂಬುವುದಿಲ್ಲ ಎಂದು ಶಿವಲಿಂಗೇಗೌಡ ಹೇಳಿದರು.
ಇದನ್ನೂ ಓದಿದ್ದೀರಾ?ಹಾಸನ | ಮಾ.ಸಚಿವ ಎಚ್.ಬಿ. ಗೋವಿಂದೇಗೌಡ: 1.10 ಲಕ್ಷ ಶಿಕ್ಷಕರನ್ನು ನೇಮಕಾತಿ ಮಾಡಿದ್ದರು;ಎಚ್.ಜಿ. ವೆಂಕಟೇಶ್
ಬರದ ಕುರಿತು ಸದನದಲ್ಲಿ ಇನ್ನೂ ಮೂರು ದಿನಗಳ ಕಾಲ ಚರ್ಚಿಸಿ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ನಾನು ಬಿಡುಗಡೆ ಮಾಡುವ ಸುದ್ದಿಯಿಂದ ದೇಶದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಲಿದೆ. ದೇಶಾದ್ಯಂತ ಅಲ್ಲೋಲ-ಕಲ್ಲೋಲ ಆಗುವುದಾದರೆ ಅವರ ಸರ್ಕಾರಕ್ಕೂ ಅಂದರೆ ಕೇಂದ್ರ ಸರ್ಕಾರಕ್ಕೂ ಅದರ ಪರಿಣಾಮ ಆಗಬೇಕಲ್ಲವೇ ಅವರು ಭಾರತ ದೇಶದಲ್ಲೇ ಇಲ್ಲವೇ ಎಂದು ಪ್ರಶ್ನಿಸಿದರು.





