ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು

Date:

ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,
ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ
ಓಂಕಾರನಾದವೆಂಬ ಸೆಳೆಕೋಲಂ ಪಿಡಿದು
ಉತ್ತರ ಕ್ರೀಯೆಂಬ ಸಾಲನೆತ್ತಿ
ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು
ಅರುಹೆಂಬ ರವಿಯ ಕಿರಣದಿಂದ ಒಣಗಿಸಿ
ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ
ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು
ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು
ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ,
ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು,
ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ,
ಹಂಸನೆಂಬ ಎತ್ತಂ ಹೂಡಿ,
ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ,
ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ
ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ.
ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು
ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು,
ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ
ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ
ಬಾಲಚಂದ್ರನೆಂಬ ಕವಣೆಯಂ ಪಿಡಿದು
ಪ್ರಪಂಚುವೆಂಬ ಹಕ್ಕಿಯಂ ಸೋವಿ
ಆ ಬತ್ತ ಬಲಿದು ನಿಂದಿರಲು,
ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ,
ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು,
ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ
ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ,
ಮುಕ್ತಿಯೆಂಬ ಕೋಟಾರಕ್ಕೆ ತಂದು,
ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ,
ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ,
ಪುಣ್ಯದ ಬೀಜಮಂ ತಳೆದು
ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು
ಅಂಗಜಾಲನ ಕಣ್ಣಮುಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ
ಯಮರಾಜನೆಂಬರಸಿಗೆ ಕೋರನಿಕ್ಕದೆ
ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು
ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ,
ಕಾಮಭೀಮ ಜೀವಧನದೊಡೆಯ ಪ್ರಭುವೆ
ನಿಮ್ಮ ಧರ್ಮ, ನಿಮ್ಮ ಧರ್ಮ..

- Advertisement -

ಒಕ್ಕಲಿಗ ಮುದ್ದಣ್ಣನು ಶ್ರೇಷ್ಠ ಕೃಷಿ ಕಾಯಕಜೀವಿ. ಬಸವಾದಿ ಪ್ರಮಥರ ಕಾಲಘಟ್ಟದಲ್ಲಿ ಒಕ್ಕಲುತನವನ್ನು ಕಾಯಕದ ಶ್ರೇಷ್ಠ ಮಾರ್ಗವನ್ನಾಗಿ ಸ್ವೀಕರಿಸಿ, ತನ್ನ ಕೃಷಿ ಕಾಯಕದ ಅನುಭವವನ್ನೇ ಆಧ್ಯಾತ್ಮಿಕ ಅನುಭಾವದೊಂದಿಗೆ ಬೆಸೆದು ವಚನಗಳ ಮುಖಾಂತರ ಅಭಿವ್ಯಕ್ತಪಡಿಸಿದ ಅನುಭಾವಿ ವಚನಕಾರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಒಕ್ಕಲಿಗ ಮುದ್ದಣ್ಣ ಮೂಲತಃ ಜೋಳದಹಾಳ ಗ್ರಾಮದವನಾದ ಎಂದು ತಿಳಿದುಬರುತ್ತದೆ.‘ಕಾಮಭೀಮ ಜೀವಧನದೊಡೆಯ’ ಎಂಬ ಅಂಕಿತದಲ್ಲಿ ಈತನ 12 ವಚನಗಳು ದೊರೆತಿವೆ. ಕೃಷಿ ಕಾಯಕದ ವೃತ್ತಿಪರ ಪರಿಭಾಷೆಯನ್ನೇ ಬಳಸಿಕೊಂಡ ಮುದ್ದಣ್ಣ ಬದುಕಿನ ಹಾಗೂ ಆತ್ಮಸಾಧನೆಯ ಸತ್ಯಗಳನ್ನು ವಿವರಿಸಿದ್ದಾನೆ. ಕೃಷಿ ಕಾಯಕದ ಪ್ರತಿಯೊಂದು ಹಂತವನ್ನು ಆಧ್ಯಾತ್ಮಿಕ ಸಾಧನೆಯ ರೂಪಕವಾಗಿ ಬಳಸಿರುವುದು ಆತನ ಬಹುತೇಕ ವಚನಗಳ ವಿಶೇಷತೆ.

ಈ ಮೇಲಿನ ವಚನವು ಮುದ್ದಣ್ಣ ವಚನಗಳಲ್ಲಿಯೇ ದೀರ್ಘ ವಚನ. ಈ ವಚನ ಅತ್ಯಂತ ಸರಳವಾಗಿದೆ. ಓದುತ್ತಾ ಹೋದರೆ ರೈತನ ಕೃಷಿ ಬದುಕಿನ ಕಥೆಯಂತೆ ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಆದರೆ, ಇಲ್ಲಿ ಕೃಷಿ ರೂಪಕ ಅಷ್ಟೇ. ಮನುಷ್ಯನ ಆತ್ಮಸಾಧನೆ, ಯೋಗ, ಜ್ಞಾನ, ಅಂತರಂಗಶುದ್ಧಿ ಮತ್ತು ಮುಕ್ತಿಯ ಮಾರ್ಗವನ್ನು ಅತ್ಯಂತ ವಿಶಿಷ್ಟವಾಗಿ ವಿವರಿಸುತ್ತದೆ.

ಇಲ್ಲಿ ಬಳಕೆಯಾದ ನೇಗಿಲು, ಎತ್ತು, ಬೀಜ, ಮಳೆ, ಕಳೆ, ಕೊಯ್ಲು, ಕೋಟಾರ ಹೀಗೆ ಎಲ್ಲವೂ ಇಲ್ಲಿ ಕೇವಲ ಕೃಷಿಯ ಪರಿಕರಗಳಲ್ಲ. ಮನುಷ್ಯನ ಆತ್ಮಸಾಧನೆಯ ವಿವಿಧ ಹಂತಗಳ ಸಂಕೇತಗಳಾಗಿ ರೂಪಾಂತರಗೊಂಡಿವೆ. ಭಕ್ತಿಯೆಂಬ ನೆಲದಲ್ಲಿ ಆತ್ಮಜ್ಞಾನವೆಂಬ ಬೆಳೆಯನ್ನು ಬೆಳೆಯಿಸುವ ಅಪೂರ್ವ ರೂಪಕವನ್ನು ಈ ವಚನ ಅತ್ಯಂತ ಸುಂದರವಾಗಿ ಕಟ್ಟಿಕೊಡುತ್ತದೆ.

ʼಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದುʼ ಎನ್ನುವ ಮಾತಿನಲ್ಲಿಯೇ ವಚನದ ಇಡೀ ತಾತ್ಪರ್ಯದ ಬೀಜ ಅಡಗಿದೆ. ಭಕ್ತಿಯೇ ಸಾಧನೆಯ ಮೂಲಭೂಮಿ. ಭಕ್ತಿಯೆಂಬ ಈ ನೆಲದಲ್ಲಿ ಗುರುವಿನ ಉಪದೇಶವೆಂಬ ನೇಗಿಲಿನಿಂದ ಆತ್ಮಸಾಧನೆಯ ಕೃಷಿ ಆರಂಭವಾಗಬೇಕು. ರೈತನು ಬೆಳೆ ಬೆಳೆಯುವ ಮೊದಲು ಭೂಮಿಯನ್ನು ನೇಗಿಲಿನಿಂದ ಹದಗೊಳಿಸಬೇಕಾಗುತ್ತದೆ. ಹಾಗೇ ಸಾಧಕ ತನ್ನ ಅಂತಃಕರಣವನ್ನು ಸಾಧನೆಗೆ ಯೋಗ್ಯವಾಗುವಂತೆ ಮನಸ್ಸು ಹದಗೊಳಿಸಿಕೊಳ್ಳಬೇಕು. ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಗುರು ಬದುಕಿಗೆ ದಾರಿದೀಪ.

ಈ ಕೃಷಿಯಲ್ಲಿ ಎತ್ತಿನ ನೇಗಿಲು ಕಟ್ಟಿ ಹೊಲ ಉಳುಮೆ ಮಾಡಿದರೆ ಮಾತ್ರ ಮಾತ್ರ ಸಾಲದು. ಅದರಲ್ಲಿರುವ ಕಳೆ, ಮುಳ್ಳು ಮತ್ತು ಕಂಟಕಗಳನ್ನು ತೆಗೆದುಹಾಕಬೇಕು. ಓಂಕಾರ ಎಂಬ ಬಾರುಕೋಲು ಕೈಯಲ್ಲಿ ಹಿಡಿದರೆ ಎತ್ತುಗಳು ಅಡ್ಡ ಹಾದಿ ಹಿಡಿಯದಂತೆ ಹತೋಟಿಗೆ ತರಬಹುದು. ಅದೇ ರೀತಿ ಸಾಧಕನ ಜೀವನದಲ್ಲಿರುವ ದುಶ್ಚಟ, ದುರ್ಗುಣ, ಅಜ್ಞಾನ, ಅಹಂಕಾರ, ಆಸೆ-ಆಕಾಂಕ್ಷೆ ಮತ್ತು ದುರ್ವಾಸನೆಗಳನ್ನು ಕಿತ್ತುಹಾಕಬೇಕು. ಅಷ್ಟೇ ಅಲ್ಲ ಕಸಕಡ್ಡಿಗಳನ್ನು ಒಣಗಿಸಿ ಸುಟ್ಟು ಹಾಕುವಂತೆ ನಮ್ಮೊಳಗಿನ ಅರಿವಿನ ಜ್ಞಾನ ಜ್ಯೋತಿಯಿಂದ ದುರ್ಗುಣ, ದುಶ್ಚಟಗಳನ್ನು ಸುಟ್ಟರೆ ಆತ್ಮಜ್ಞಾನ ಬೆಳೆಯುತ್ತದೆ ಎಂದು ಹೇಳುತ್ತಾರೆ.

ಒಕ್ಕಲಿಗ ಮುದ್ದಣ್ಣ ಮಾನವ ದೇಹವನ್ನೇ ಒಂದು ಆಧ್ಯಾತ್ಮಿಕ ಕೃಷಿಭೂಮಿಯನ್ನಾಗಿ ಕಾಣುತ್ತಾರೆ. ಬಿತ್ತನೆಗೆ ಹೊಲ ಸಿದ್ಧವಾದ ಬಳಿಕ ನಾದ, ಬಿಂದು, ಕಳೆ ಮುಂತಾದ ಯೋಗಸಾಧನೆಯ ಸೂಕ್ಷ್ಮ ಪರಿಕಲ್ಪನೆಗಳ ಮೂಲಕ ವಚನಕಾರರು ಸಾಧಕನನ್ನು ಹೊರಗಿನ ಜಗತ್ತಿನಿಂದ ಒಳಗಿನ ಜಗತ್ತಿನತ್ತ ಕರೆದೊಯ್ಯುತ್ತಾರೆ.

ʼಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿʼ ಎಂಬ ಚಿತ್ರಣ ಸಾಮಾನ್ಯ ಕೃಷಿಯ ದೃಶ್ಯವನ್ನು ಯೋಗಸಾಧನೆಯ ಪ್ರಕ್ರಿಯೆಯೊಂದಿಗೆ ಜೋಡಿಸುತ್ತದೆ. ದೇಹ ಎಂಬುದು ಹೊಲವಾದರೆ, ನಾಡಿಗಳು ಅದರ ಕೃಷಿಯ ಮಾರ್ಗಗಳು, ಪ್ರಣವವು ಬೀಜ, ಯೋಗ ಸಾಧನೆ ಅದರ ಪೋಷಣೆ. ದೇಹ, ಮನಸ್ಸು ಮತ್ತು ಚೈತನ್ಯದ ಸಮನ್ವಯವೇ ಆತ್ಮಕೃಷಿಯ ಆಧಾರ ಎಂಬುದು ಹೇಳುತ್ತಾನೆ ಮುದ್ದಣ್ಣ.

ಈ ಬೀಜಕ್ಕೆ ಸರ್ವಶಾಂತಿ ನಿರ್ಮಲವೆಂಬ ಮೇಘ ಮಳೆ ಸುರಿದಾಗ ʼನೀಲಬ್ರಹ್ಮವೆಂಬ ಸಸಿʼ ಮೊಳೆಯುತ್ತದೆ ಎಂದು ಸುಂದರ ರೂಪಕದ ಮುಖಾಂತರ ತಿಳಿಸುತ್ತಾರೆ. ಭಕ್ತಿಯ ನೆಲದಲ್ಲಿ ಗುರು ಉಪದೇಶದಿಂದ ಹದವಾದ ಅಂತಃಕರಣದಲ್ಲಿ ಪ್ರಣವವೆಂಬ ಜ್ಞಾನಬೀಜ ಬಿತ್ತಲ್ಪಟ್ಟು, ಶಾಂತಿ ಮತ್ತು ನಿರ್ಮಲತೆಯ ಮಳೆಯಿಂದ ಅದು ಬ್ರಹ್ಮಜ್ಞಾನವೆಂಬ ಸಸಿಯಾಗಿ ಮೊಳೆಯುತ್ತದೆ. ಇಲ್ಲಿ ಜ್ಞಾನವು ಹೊರಗಿನಿಂದ ತಂದುಕೊಡುವ ವಸ್ತುವಲ್ಲ; ಸಾಧನೆಯ ಮೂಲಕ ನಮ್ಮೊಳಗೇ ಚಿಗುರೊಡೆಯಬೇಕು.

ಹೊಲದಲ್ಲಿ ಸಸಿ ಮೊಳಕೆಯೊಡೆದ ಕೂಡಲೇ ಕೃಷಿ ಮುಗಿಯುವುದಿಲ್ಲ. ಬೆಳೆ ಬೆಳೆದಂತೆ ಕಳೆ ತೆಗೆಯಬೇಕು, ರಕ್ಷಿಸಬೇಕು. ವಚನಕಾರರು ಯೋಗದ ವಿವಿಧ ಸಂಕೇತಗಳ ಮೂಲಕ ಸಾಧಕನು ತನ್ನೊಳಗಿನ ವಿಕಾರ, ಅಶುದ್ಧತೆ ಮತ್ತು ಅಸ್ಥಿರತೆಗಳನ್ನು ನಿರಂತರವಾಗಿ ನಿವಾರಿಸಿಕೊಳ್ಳಬೇಕೆಂದು ಸೂಚಿಸುತ್ತಾರೆ. ಆತ್ಮಸಾಧನೆ ಒಂದೇ ದಿನದಲ್ಲಿ ಮುಗಿಯುವ ಕೆಲಸವಲ್ಲ. ಬೆಳೆ ಬೆಳೆಸುವ ಕೃಷಿಕನಂತೆ ಸಾಧಕನೂ ನಿರಂತರ ಎಚ್ಚರಿಕೆ ಮತ್ತು ಪರಿಶ್ರಮದಿಂದ ತನ್ನ ಒಳಜಗತ್ತನ್ನು ಕಾಪಾಡಿಕೊಳ್ಳಬೇಕು.

ಹೊಲದಲ್ಲಿ ಬೆಳೆ ಬೆಳೆದಾಗ ಅದನ್ನು ಹಕ್ಕಿಗಳಿಂದ ರಕ್ಷಿಸಬೇಕಾಗುತ್ತದೆ. ʼಪ್ರಪಂಚುವೆಂಬ ಹಕ್ಕಿಯಂ ಸೋವಿʼ ಎನ್ನುತ್ತಾನೆ ಮುದ್ದಣ್ಣ. ಇಲ್ಲಿ ಪ್ರಪಂಚವೇ ಹಕ್ಕಿ. ಲೋಕದಲ್ಲಿದ್ದುಕೊಂಡೇ ಲೋಕದ ಮೋಹಕ್ಕೆ ಒಳಗಾಗದೆ ಬದುಕುವ ಕುರಿತು ವಿಶ್ಲೇಷಿಸುತ್ತಾರೆ. ʼಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿʼ ಎಂದು ಬೆಳೆ ಕೊಯ್ಯುವ ಪರಿ ವಿವರಿಸುತ್ತಾನೆ. ಆತ್ಮಜ್ಞಾನವೆಂಬ ಕುಡುಗೋಲಿನಿಂದ ಸಂಸಾರದ ಬಂಧನವನ್ನು ಕತ್ತರಿಸಿ ಮುಕ್ತಿಯತ್ತ ಸಾಗಬೇಕು ಎಂಬುದು ಇದರ ಅರ್ಥವಾಗಿದೆ.

ಈ ವಚನವು ಕೃಷಿ ಮತ್ತು ಆತ್ಮಸಾಧನೆ ಎರಡು ಒಂದೇ ತಂತಿಯಲ್ಲಿ ಕಟ್ಟಿದ ಅದ್ಭುತ ತತ್ತ್ವಕಾವ್ಯ. ರೈತನು ಭೂಮಿಯನ್ನು ಹದಗೊಳಿಸಿ, ಕಳೆ ತೆಗೆದು, ಬೀಜ ಬಿತ್ತಿ, ಮಳೆಗಾಗಿ ಕಾದು, ಬೆಳೆಯನ್ನು ಕಾಪಾಡಿ, ಕೊನೆಗೆ ಕೊಯ್ದು ಕೋಟಾರದಲ್ಲಿ ತುಂಬುವಂತೆ, ಸಾಧಕನೂ ಭಕ್ತಿಯ ನೆಲದಲ್ಲಿ ಗುರುವಿನ ಉಪದೇಶದಿಂದ ತನ್ನ ಅಂತಃಕರಣವನ್ನು ಹದಗೊಳಿಸಬೇಕು. ದುಶ್ಚಟ, ದುರ್ಗುಣಗಳನ್ನು ಕಳೆದು, ಪ್ರಣವ-ಯೋಗ-ಜ್ಞಾನದ ಬೀಜವನ್ನು ಬಿತ್ತಬೇಕು. ಶಾಂತಿ ಮತ್ತು ನಿರ್ಮಲತೆಯಿಂದ ಅದನ್ನು ಪೋಷಿಸಬೇಕು. ಪ್ರಾಪಂಚಿಕ ಮೋಹವೆಂಬ ಹಕ್ಕಿಯಿಂದ ರಕ್ಷಿಸಬೇಕು. ಅಂತಿಮವಾಗಿ ಜನನ-ಮರಣದ ಬಂಧನವನ್ನು ಕತ್ತರಿಸಿ ಮುಕ್ತಿಯ ಕೋಟಾರವನ್ನು ತಲುಪಬೇಕು ಎಂಬುದನ್ನು ರೂಪಕದ ಮುಖಾಂತರ ಮುದ್ದಣ್ಣ ವಿವರಿಸಿದ್ದಾನೆ.

ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ,
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

ಕಾಯಕದಲ್ಲಿ ಮೇಲು-ಕೀಳು, ಬಡವ-ಶ್ರೀಮಂತ ಸೇರಿದಂತೆ ಕುಲ, ಮತ ಭೇದಗಳಿಲ್ಲ. ಕಾಯಕದ ನಿಷ್ಠೆಯಲ್ಲಿಯೇ ಮನುಷ್ಯನ ಘನತೆ ಅಡಗಿದೆ ಎಂದು ಮೇಲಿನ ವಚನದಲ್ಲಿ ತಿಳಿಸುತ್ತಾನೆ. ಒಬ್ಬ ವ್ಯಕ್ತಿಯನ್ನು ಆತನ ಜಾತಿ ನೋಡಿ ಗುರುತಿಸುವ ಬದಲಿಗೆ ಸತ್ಯ, ನಿಷ್ಠೆ, ಜ್ಞಾನ, ವ್ಯಕ್ತಿತ್ವಕ್ಕೆ ಮನ್ನಣೆ ನೋಡಬೇಕು. ಒಬ್ಬ ವ್ಯಕ್ತಿ ಹುಟ್ಟಿನಿಂದಲೇ ಶ್ರೇಷ್ಠ-ಕನಿಷ್ಠ ಎಂಬುದು ಇರುವುದಿಲ್ಲ. ಆತನ ಕಾಯಕದಿಂದಲೇ ಘನತೆ ರೂಪುಗೊಳ್ಳುತ್ತದೆ ಎಂಬುದನ್ನು ತಿಳಿಸಿದ್ದಾನೆ.

ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ,
ವಿಶ್ವಾಸವೆಂಬ ಬತ್ತ ಒಲಿದು ಉಂಡು
ಸುಖಿಯಾಗಿರಬೇಕೆಂದ ಕಾಮಬಿಮ ಜೀವಧನದೊಡೆಯ

ಎಲ್ಲ ಶರಣರಂತೆ ಮುದ್ದಣ ಕೂಡ ಲಿಂಗಾಂಗ ಸಾಮರಸ್ಯದ ಬಗ್ಗೆ ತಿಳಿಸುತ್ತಾನೆ. ತನ್ನ ಕೃಷಿ ಬದುಕಿನ ಪರಿಭಾಷೆಯನ್ನೇ ಬಳಸಿ ಮಾನವ ಜನಾಂಗದ ನೆಮ್ಮದಿ ಬದುಕಿನ ಕುರಿತು ಉಪದೇಶ ನೀಡಿರುವುದು ನೋಡುತ್ತೇವೆ. ದೇಹವೆಂಬುದು ಭೂಮಿ ಇದ್ದ ಹಾಗೆ, ಅದರಲ್ಲಿ ಲಿಂಗವೆಂಬ ಬೆಳೆ ಬೆಳೆಯಬೇಕಾದರೆ ಭೂಮಿ ಹದಗೊಳಿಸುವುದು ಅಗತ್ಯ. ಹಾಗೇ ಅಂಗದ ಮೇಲೆ ಲಿಂಗ ಧರಿಸಿದ ವ್ಯಕ್ತಿಯ ಶರೀರ ಯಾವುದೇ ದುರ್ಗುಣ, ದುಶ್ಚಟಗಳಿಲ್ಲದೆ ನಿರ್ಮಲವಾಗಿರಬೇಕು. ನಿಷ್ಠೆಯ ಕಾಯಕ, ಭಕ್ತಿಯಿಂದ ಬೆಳೆದ ಫಸಲು ಸ್ವೀಕರಿಸಿ ಸುಖಿಯಾಗಿರಬೇಕು ಎಂದು ಹೇಳುತ್ತಾರೆ.

ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.
ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು.
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?
ಕ್ರೀಯ ಬಿಡಲಿಲ್ಲ, ಅರಿವ ಮರೆಯಲಿಲ್ಲ.
ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?
ಫಲವ ಹೊತ್ತ ಪೈರಿನಂತೆ, ಪೈರನೊಳಕೊಂಡ ಫಲದಂತೆ,
ಅರಿವು ಆಚರಣೆಯೆಲ್ಲ ನಿಂದು,
ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನನೊಡೆಯನೆಂಬುದ ಭಾವಿಸಲಿಲ್ಲ.

ಜಮೀನಿನಲ್ಲಿ ಬೆಳೆದ ಸಸಿಗೆ ಎಷ್ಟು ನೀರು ಬೇಕೊ ಅಷ್ಟೇ ನೀರು ಹರಿಸಬೇಕು. ಹೆಚ್ಚು ನೀರು ಹರಿಸಿದರೆ ಬೆಳೆ ಕೊಳೆಯುತ್ತದೆ, ಕಡಿಮೆ ನೀರು ಹರಿಸಿದರೆ ಒಣಗುತ್ತದೆ. ಯಾವುದೇ ಕೆಲಸವನ್ನು ಅರಿವಿನಿಂದ ಪಾಲಿಸಿದರೆ ಹಾನಿ ಸಂಭವಿಸುವುದಿಲ್ಲ. ಪೈರಿನ ಏರಿಯಾದಲ್ಲಿ ಹಿಡಿಯುವಷ್ಟು ನೀರು ಸದುಪಯೋಗ ಮಾಡಿಕೊಂಡರೆ ನೀರಿನ ಕೊರತೆ ಆಗುವುದಿಲ್ಲ. ಹೊಲದಲ್ಲಿ ಬೆಳೆದ ಬೆಳೆ ಕಟಾವು ಮುಗಿದ ಮೇಲೆ ಮತ್ತೆ ಕಾಯಬೇಕಾದ ಅಗತ್ಯವಿಲ್ಲ. ಆದರೆ, ಸಸಿಯಿಂದ ಕೊಯ್ಯುವ ತನಕ ಕ್ರಿಯೆ ಮತ್ತು ಅರಿವು ಒಂದಾಗಿರಬೇಕು. ʼಫಲವ ಹೊತ್ತ ಪೈರಿನಂತೆ, ಪೈರನೊಳಕೊಂಡ ಫಲದಂತೆʼ ಬದುಕಿನಲ್ಲಿ ಎದುರಾದ ನೋವು-ನಲಿವು ಸಮವಾಗಿ ಸ್ವೀಕರಿಸಬೇಕು. ಅರಿವು ಆಚರಣೆಯಲ್ಲಿ ಇರಬೇಕು. ಆಚರಣೆ ಅರಿವಿನಲ್ಲಿ ಕೂಡಿರಬೇಕು ಎಂಬುದು ಮುದ್ದಣ್ಣ ತಿಳಿಸುತ್ತಾರೆ.

ಇದನ್ನೂ ಓದಿ : ವಚನ ಕಲ್ಯಾಣ | ಕೊಲ್ಲದಿರ್ಪುದೆ ಧರ್ಮ

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಂತಿ ಮಾತುಕತೆ ಬೆನ್ನಲ್ಲೇ ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ; 2 ಸಾವು, 34 ಮಂದಿಗೆ ಗಾಯ

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಕುರಿತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಕೆಲವೇ...

ನ.1ರಿಂದ GST ವಿನಾಯಿತಿ ಸಡಿಲಿಕೆ; ಉದ್ದೇಶಿತ ಬದಲಾವಣೆಗಳೇನು?

ಸಣ್ಣ ಇ-ಕಾಮರ್ಸ್ ಮಾರಾಟಗಾರರಿಗೆ GST ನೋಂದಣಿ ಸರಳಗೊಳಿಸುವುದು, ತೆರಿಗೆ ಮರುಪಾವತಿಯನ್ನು ತ್ವರಿತಗೊಳಿಸುವುದು...

ಸುದೀರ್ಘ ವಿಚಾರಣಾಧೀನ ಬಂಧನ ‘ಶಿಕ್ಷೆ’ಯಾಗದಿರಲಿ: ₹979 ಕೋಟಿ ಹಗರಣದ ಆರೋಪಿಗಳಿಗೆ ಸುಪ್ರೀಂ ಜಾಮೀನು

​₹979.45 ಕೋಟಿ ಮೌಲ್ಯದ ಸರ್ಕಾರಿ ಗುತ್ತಿಗೆಗಳನ್ನು ಪಡೆಯಲು ವಂಚನೆ ಹಾಗೂ ಅಕ್ರಮ...

ಮೈಸೂರು ದಸರಾ ವೇದಿಕೆಯಲ್ಲಿ ಕಂಗಟಿ ಗ್ರಾಮದ ಮಹಿಳೆಯರ ಕೋಲಾಟ ಪ್ರದರ್ಶನ

ನಾಡಹಬ್ಬ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ...