ಪ್ರತಿ ಜೀವವೂ ಅಮೂಲ್ಯ ವನ್ಯಜೀವಿ ಮತ್ತು ಮಾನವ ಸಂಘರ್ಷದಿಂದ ಸಾವು, ನೋವು ಸಂಭವಿಸುತ್ತಿರುವುದು ದುಃಖದ ಸಂಗತಿ. ಅರಣ್ಯ ಪ್ರದೇಶ ಕಡಿಮೆ ಆಗಿದೆ. ಅರಣ್ಯದ ಅಂಚಿನಲ್ಲಿ ಕಲ್ಲು ಗಣಿಗಾರಿಕೆ ಚಟುವಟಿಕೆ ನಡೆಯುತ್ತಿದೆ. ವಿಚಲಿತವಾಗಿ ಆನೆಗಳು ನಾಡಿಗೆ ಬರುತ್ತಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಹಾಸನ ಜಿಲ್ಲೆ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಆನೆ ಕಾರ್ಯಾಚರಣೆಯ ವೇಳೆ ಇತ್ತೀಚೆಗೆ ಮೃತಪಟ್ಟ ಶಾರ್ಪ್ ಶೂಟರ್ ಎಚ್ ಎಚ್ ವೆಂಕಟೇಶ್ ಅವರ ನಿವಾಸಕ್ಕೆ ಬುಧವಾರ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿದ್ದು, ವೆಂಕಟೇಶ್ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದರು.
“ಆನೆಗಳು ನಾಡಿಗೆ ಬಾರದಂತೆ ತಡೆಯಲು ಆನೆ ಬ್ಯಾರಿಕೇಡ್ ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ರೈಲ್ವೆ ಹಳಿಗಳ ಲಭ್ಯತೆಯೂ ಕಡಿಮೆ ಇದೆ. ಹೆಚ್ಚು ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದೆ” ಎಂದು ತಿಳಿಸಿದರು.
“ವೆಂಕಟೇಶ್ ಅವರು ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವೇಳೆ ನಿಯಮಾವಳಿ ಪಾಲನೆಯಲ್ಲಿ ಲೋಪವಾಗಿದೆ ಎಂಬ ಆರೋಪ ಇದೆ. ನಿರ್ಲಕ್ಷ್ಯದ ದೂರು ಕೂಡ ದಾಖಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೂಡ ತನಿಖೆ ನಡೆಸುತ್ತಿದೆ. ನಿರ್ಲಕ್ಷ್ಯ ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ, ವಿಚಾರಣೆ ನಡೆಸಿ ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದರು.
“ತಮ್ಮ ಅದ್ಭುತ ಕಾರ್ಯದಿಂದ ಆನೆ ವೆಂಕಟೇಶ್ ಎಂದೇ ಖ್ಯಾತರಾಗಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಅವರ ನಿಧನದಿಂದ ರಾಜ್ಯಕ್ಕೆ ಹಾಗೂ ಅರಣ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ನಿಮ್ಮ ಕುಟುಂಬದ ನೋವಿನಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಭಾಗಿಯಾಗುತ್ತೇವೆ” ಎಂದರು.
“ಆಗಸ್ಟ್ 31ರಂದು ಮಧ್ಯಾಹ್ನ ಘಟನೆಯ ಬಗ್ಗೆ ತಿಳಿದ ಕೂಡಲೇ ಸಂಬಂಧಿತ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಮತ್ತು ಆಸ್ಪತ್ರೆಯ ವೈದ್ಯರಿಗೆ ಅವರ ಜೀವ ಉಳಿಸಲು ಸಕಲ ಪ್ರಯತ್ನ ಮಾಡುವಂತೆ ತಿಳಿಸಲು ಸೂಚಿಸಿದ್ದೆವು. ದಸರಾ ಆನೆಗಳ ಗಜಪಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರಣ ಅಂದೇ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ, ವೆಂಕಟೇಶ್ ಅವರ ಪುತ್ರ ಮೋಹಿತ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಲಾಗಿತ್ತು” ಎಂದು ಸಚಿವರು ತಿಳಿಸಿದರು.
₹ 10 ಲಕ್ಷ ಹೆಚ್ಚುವರಿ ಪರಿಹಾರದ ಭರವಸೆ
“ಕಾಡಾನೆ ದಾಳಿಯಿಂದ ಮೃತಪಟ್ಟಿರುವ ವೆಂಕಟೇಶ್ ಕುಟುಂಬಕ್ಕೆ ಈಗಾಗಲೇ ₹ 15 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಇಲಾಖೆಯಿಂದ ₹10 ಲಕ್ಷ ಹೆಚ್ಚುವರಿ ಪರಿಹಾರ ನೀಡಲು ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿದ್ದು, ಒಂದು ವಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಬಂದು ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಪ್ರಕರಣ ಹಿಂಪಡೆಯಲು ಶಿಫಾರಸು: “ಕಾಡಾನೆ ದಾಳಿಗೆ ಸಂಬಂಧಿಸಿದಂತೆ ಹೋರಾಟ ನಡೆಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದು, ಅದನ್ನು ಹಿಂಪಡೆಯುವಂತೆ ಶಿಫಾರಸು ಮಾಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಕಾಡಾನೆ ಸಮಸ್ಯೆ ಹಾಸನ, ರಾಮನಗರ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿಯೂ ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮುಂದಿನ ಕೆಲ ದಿನಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ವಿಶೇಷ ತಜ್ಞರು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆದು ವಿಶೇಷ ಸಭೆ ಕರೆದು ಚರ್ಚಿಸಲಾಗುವುದು ಎಂದು ಸಚಿವ ಖಂಡ್ರೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಆನೆ ದಾಳಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು
ಮುಖ್ಯಮಂತ್ರಿಗೂ ಈ ಬಗ್ಗೆ ಮನವರಿಕೆ ಮಾಡಲಾಗಿದ್ದು, ಈ ಮೂಲಕ ನಮ್ಮ ಸರ್ಕಾರದಿಂದ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ. ಶ್ರುತಿ, ಬೇಲೂರು ತಹಶೀಲ್ದಾರ್ ಮಮತಾ, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಯಡೇಹಳ್ಳಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.