ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಅರಸೀಕೆರೆ ತಾಲೂಕನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಅರಸೀಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ. ಈ ಕಷ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕಿತ್ತು, ಸಭೆ ಮಾಡಬೇಕಿತ್ತು. ಆದರೆ, ಯಾವುದೇ ಸಭೆ ಮಾಡಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಸನದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, “ಇವತ್ತು ರಾಜ್ಯ, ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಗೈಡ್‌ಲೈನ್ಸ್ ಮೂಲಕ ರಾಜ್ಯವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಗೈಡ್‌ಲೈನ್ಸ್‌ನಿಂದ ಕೇಂದ್ರ ಸರ್ಕಾರ ರೈತರಿಗೆ ಮಣ್ಣು ಎರಚುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇವತ್ತು ರೈತರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಆದರೆ ಗೈಡ್‌ಲೈನ್ಸ್ ಬದಲಾವಣೆ ಮಾಡುತ್ತಿಲ್ಲ” ಎಂದು ಕಿಡಿಕಾರಿದರು.
“ರೈನ್ ಗೇಜ್ ಇಡ್ತಾರೆ. ಅವು ಸರಿಯಾಗಿ ವರ್ಕ್ ಆಗುತ್ತವೋ, ಇಲ್ಲವೋ ಗೊತ್ತಿಲ್ಲ. ಏಪ್ರಿಲ್‌ನಲ್ಲಿ ಸರಿಯಾಗಿ ಮಳೆ ಬರಲಿಲ್ಲ. ಬಂದ ಅಲ್ಪಸ್ವಲ್ಪ ಮಳೆಗೆ ರೈತರು ಬಿತ್ತನೆ ಮಾಡಿದ್ದರು. ʼಸಂಪೂರ್ಣವಾಗಿ ಮುಂಗಾರು ಮಳೆ ಬಾರದಿದ್ದರಿಂದ ಬೆಳೆ ನಾಶವಾಗಿದೆʼ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಮೇ.15 ರಿಂದ ಜುಲೈ ಅಂತ್ಯದವರೆಗೂ ಸ್ವಲ್ಪ ಮಳೆ ಬಂತು, ರೈತರು ಮನೆಯಲ್ಲಿದ್ದಿದ್ದನ್ನೆಲ್ಲಾ ಅಡವಿಟ್ಟು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಮಳೆ ಇಲ್ಲದೆ ಬೆಳೆ ಹಾನಿಯಾಗಿದೆ. ಇತ್ತ ಸರ್ಕಾರವು ಬರ ತಾಲೂಕು ಪಟ್ಟಿಯಿಂದ ಕೈಬಿಟ್ಟಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“40 ಸಾವಿರ ಎಕರೆ ಪ್ರದೇಶದಲ್ಲಿ ರಾಗಿ, 9 ಸಾವಿರ ಎಕರೆ ಪ್ರದೇಶದಲ್ಲಿ ಜೋಳ, 15 ರಿಂದ 16 ಸಾವಿರ ಎಕರೆ ಪ್ರದೇಶದಲ್ಲಿ ಉಳಿದ ಬೆಳೆ ಬಿತ್ತನೆ ಮಾಡಿದ್ದರು. ಆಗಸ್ಟ್‌ನಿಂದ ಈವರಗೂ ಒಂದು ಹನಿ ಮಳೆ ಬಂದಿಲ್ಲ. ಮೇ, ಜೂನ್‌ನಲ್ಲಿ ಮಳೆ ಆದರೆ ಬಂದಿರುವ ಬೆಳೆ ಯಾವುದು? ನಮ್ಮ ಅರಸೀಕೆರೆ ತಾಲೂಕನ್ನು ಏಕೆ ಬರಪೀಡಿತವೆಂದು ಘೋಷಣೆ ಮಾಡಿಲ್ಲ. ನಮ್ಮ ತಾಲೂಕನ್ನು ಎ ಗ್ರೇಡ್‌ಗೆ ಸೇರಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದಿದ್ದರೆ ಮೀಸಲಾತಿಯ ಉದ್ದೇಶವೇ ವಿಫಲ: ಸಿದ್ದರಾಮಯ್ಯ
“ನಿಮ್ಮ ರೈನ್ ಗೇಜ್ ಕಿತ್ತು ಎಸೆಯಿರಿ. ಸ್ಥಳಕ್ಕೆ ಬಂದು ಅಧ್ಯಯನ ಮಾಡಿ. ನಮ್ಮಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಬರಪೀಡಿತ ಪ್ರದೇಶವೆಂದು ಘೋಷಿಸಿ. ಈ ಕಷ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಸಭೆಯನ್ನು ಮಾಡಲಿಲ್ಲ. ಅಧಿಕಾರಿಗಳು ಖಾಲಿ ಡಬ್ಬಗಳನ್ನು ಇಟ್ಟುಕೊಂಡಿದ್ದಾರೆ. ಖಾಲಿ ಡಬ್ಬಗಳನ್ನು ಇಟ್ಕೊಂಡು ರಿಸಲ್ಟ್ ನೀಡುತ್ತಿದ್ದಾರೆ” ಎಂದು ಟೀಕಿಸಿದರು.
“ಅರಸೀಕೆರೆ ತಾಲೂಕಿನಲ್ಲಿ ಶೇ.33ರಷ್ಟು ಬೆಳೆ ಬಂದಿದಿಯಾ ಚಾಲೆಂಜ್ ಮಾಡುತ್ತೇನೆ. ಎನ್‌ಡಿಆರ್‌ಎಫ್ ಗೈಡ್‌ಲೈನ್ಸ್ ಚೇಂಜ್ ಮಾಡಲೇಬೇಕು. ಇದರ ಬಗ್ಗೆ ಹೋರಾಟ ಮಾಡುತ್ತೇನೆ. ಗುರುವಾರ ಹನ್ನೆರಡು ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ. ನಮ್ಮ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಲೇಬೇಕು” ಎಂದು ಆಗ್ರಹಿಸಿದರು.