ಹಾವೇರಿ ನಗರದ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಿಂದ ಹೊಸಮನಿ ಸಿದ್ದಪ್ಪ ವೃತ್ತದವರಿಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಸುಪ್ರೀಂ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಮಾರ್ಕೆಟ್ ರೋಡ್, ಗಾಂಧಿ ಸರ್ಕಲ್ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಧಾವಿಸಿ, ರಸ್ತೆ ತಡೆ ನಡೆಸಲಾಯಿತು. ಮುಖಂಡರು ಹಾಗೂ ಕಾರ್ಯಕರ್ತರು ಒಳಮೀಸಲಾತಿ ಮಾಡುವಂತೆ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರಕಾರಕ್ಕೆ ಹಕ್ಕಿದೆ ಎಂದು ಸುಪ್ರೀಂ ಪೀಠವು ತೀರ್ಪು ನೀಡಿದೆ. ಮೂವತ್ತು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಬಸವರಾಜ ಹೆಡಿಗೊಂಡ ಮಾತನಾಡಿ, ಒಳಮೀಸಲಾತಿ ವರ್ಗೀಕರಣದಿಂದ ಎಲ್ಲ ಜಾತಿಗಳಿಗೆ ಸಮಾನ ಅವಕಾಶ ಲಭಿಸುತ್ತದೆ. ಹಾಗಾಗಿ ಹೋರಾಟಗಳನ್ನು ಮನಗಂಡಿದ್ದ ಸರ್ಕಾರವೂ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಿ ವರದಿ ನೀಡುವಂತೆ 2005ರಲ್ಲಿ ರಚಿಸಿದ ನ್ಯಾಯಮೂರ್ತಿ ಎ ಜೆ ಸದಾಶಿವ ಏಕಸದಸ್ಯ ಆಯೋಗವು ರಾಜ್ಯದಲ್ಲಿ 101 ಎಸ್‌ಸಿ ಜಾತಿ ಸಮುದಾಯಗಳ ಕೌಟುಂಬಿಕ ಸಮೀಕ್ಷೆ ನಡೆಸಿ ಸಮಗ್ರ ಅಧ್ಯಯನದ ವರದಿಯನ್ನು 2012 ರಲ್ಲಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಅದರ ದತ್ತಾಂಶಗಳು ಸರಕಾರದ ಬಳಿ ಇದೆ. ಹಾಗಾಗಿ, ಒಳಮೀಸಲಾತಿ ಮಾಡಲು ಸರ್ಕಾರ ಮುಂದಾಗಬೇಕು ಎಂದರು.
ಮುಖಂಡರಾದ ಉಡಚಪ್ಪ ಮಾಳಗಿ ಮಾತನಾಡಿ, 2011ರ ಜನಗಣತಿಯ ವರದಿಯಂತೆ ಕರ್ನಾಟಕದಲ್ಲಿ ಎಸ್‌ಸಿ 101 ಜಾತಿಗಳಿದ್ದು ಒಟ್ಟು ಜನಸಂಖ್ಯೆ 1,04,74,992 ಇದೆ. ಈಗಿರುವ ಶೇ 17% ರ ಮೀಸಲಾತಿಯನ್ನು ವರ್ಗಿಕರಿಸಿದರೆ, ತಲಾ 6 ಲಕ್ಷ ಜನಸಂಖ್ಯೆಗೆ ಶೇ 1% ರಷ್ಟು ಮೀಸಲಾತಿ ದೊರಕುತ್ತದೆ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಡಿ ಎಸ್ ಮಾಳಗಿ ಮಾತನಾಡಿ, ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಿದರೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿದಂತಾಗುತ್ತದೆ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಮಾಜದ ಹಿರಿಯರಾದ ಪರಮೇಶಪ್ಪ ಮೇಗಲಮನಿ, ನೀಲಕಂಠಪ್ಪ ಕುಸನೂರ, ಬಿ ಆರ್ ಪುಟ್ಟಣ್ಣನವರ, ಪ್ರಕಾಶ ಪೂಜಾರ, ಚಂದ್ರಪ್ಪ ಹರಿಜನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಮ್ ಆಜಂನೇಯ,ಎಸ್‌ಜಿ ಹೊನ್ನಪ್ಪನವರ, ನಾಗರಾಜ ಮಾಳಗಿ, ಹೊನ್ನಪ್ಪ ತಗಡಿನಮನಿ, ಅಶೋಕ ಮರೆಣ್ಣನವರ, ಮಂಜಪ್ಪ ಮರೋಳ, ಏಳಕೊಟೆಪ್ಪ ಪಾಟೀಲ, ಮಹಾದೇವಪ್ಪ ಮಾಳಮ್ಮನವರ, ಮಾಲತೇಶ ಯಲ್ಲಾಪುರ, ಡಾ.ಮಲ್ಲೇಶಪ್ಪ ಹರಿಜನ, ತಿರಕಪ್ಪ ಚಿಕ್ಕೇರಿ, ಶ್ರೀಮತಿ ಪ್ರೇಮಾ ಕಲಕೇರಿ, ಶ್ರೀಮತಿ ರೇಣುಕಾ ಕೆಂಚನೆಲ್ಲನವರ,ಸಂತೋಷ ಗುಡ್ಡಪ್ಪನವರ, ಮಾರುತಿ ಸೊಟ್ಟಪ್ಪನವರ, ರಾಜಶೇಖರ ಮಾದರ, ಸುರೇಶ ಆಶಾಧಿ, ನಾಗರಾಜ ಹಾವನೂರ, ಮರಿಯಪ್ಪ ನಡುವಿನಮನಿ, ಸುಭಾಷ ಮಾಳಗಿ,ಬರಾಜು ಮಾದರ, ಫಕ್ಕಿರೇಶ ಕಾಳಿ, ರವಿ ದಂಡಿನ, ಜಗದೀಶ ಹರಿಜನ, ಸುಭಾಷ ಬೆಂಗಳೂರು,ಆನಂದ ಮುರಡೆಪ್ಪನವರ, ನೀಲಪ್ಪ ದೊಡ್ಡಮನಿ, ಮಲ್ಲೇಶ ಕಡಕೋಳ, ನಾಗರಾಜ ಬಣಕಾರ, ಮೈಲಪ್ಪ ಗೊಣಿಬಸಮ್ಮನವರ, ಬಸವರಾಜ, ಮೈಲಪ್ಪ ದಾಸಪ್ಪನವರ, ಸುರೇಶ ದೇವರಗುಡ್ಡ, ದುರುಗೇಶ ಗೊಣೆಮ್ಮನವರ, ಕರಿಯಪ್ಪ ಕಟ್ಟಿಮನಿ, ಸುನೀಲ್ ಬೇಟಗೇರಿ, ಮಾಲತೇಶ ಮೈಲಾರ, ಫಕ್ಕಿರೇಶ ಕೋಣತಂಬಿಗಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
