ಹಾವೇರಿ ಜಿಲ್ಲೆಯಲ್ಲಿ ಈ ಬಾರಿ ಉಂಟಾದ ಮಳೆಯ ಅಭಾವದಿಂದ ಅಂತರ್ಜಲ ಮಟ್ಟದಲ್ಲಿ ಭಾರಿಕುಸಿತ ಉಂಟಾಗಿದ್ದು ಕಳೆದ ಐದು ವರ್ಷಗಳಲ್ಲೇ ಈ ವರ್ಷ ಗರಿಷ್ಠ ಕುಸಿತ ಕಂಡಿದೆ. 2019 ಅಕ್ಟೋಬರ್ ಅಂತ್ಯಕ್ಕೆ 6.95ಮೀಟರ್ ಇದ್ದ ಅಂತರ್ಜಲ ಮಟ್ಟವು 2023ರಲ್ಲಿ ಬರೋಬ್ಬರಿ 11.05 ಮೀಟರ್‌ಗೆ ಕುಸಿದಿದೆ.
ಅಂದರೆ ಬರೋಬ್ಬರಿ 4 ಮೀಟರ್‌ನಷ್ಟು ಇಳಿಕೆಯಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಅಂತರ್ಜಲ ಮಟ್ಟ 2019ರಲ್ಲಿ 17.12 ಮೀ., 2020ರಲ್ಲಿ 11.47 ಮೀ., 2021ರಲ್ಲಿ 9.59 ಮೀ., 2022ರಲ್ಲಿ 7.90 ಮೀಟರ್‌ನಷ್ಟು ಇದ್ದ ಅಂತರ್ಜಲ ಮಟ್ಟ 2023ರಲ್ಲಿ 12.24ಕ್ಕೆ ಕುಸಿದಿದೆ.
ಅಂತರ್ಜಲ ಮೌಲೀಕರಣ 2020ರ ಪ್ರಕಾರ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ, ಬ್ಯಾಡಗಿ, ಹಿರೇಕೆರೂರ ಮತ್ತು ರಾಣೆಬೆನ್ನೂರು ತಾಲೂಕುಗಳಲ್ಲಿ ಅಂತರ್ಜಲ ಅತಿ ಬಳಕೆಯಾಗುತ್ತಿದೆ. ಅಂತರ್ಜಲದ ಅತಿಯಾದ ಬಳಕೆಯಿಂದ ಕೊಳವೆಬಾವಿಗಳು ಬತ್ತುತ್ತಿದ್ದು, ರೈತರು ಬೇಸಿಗೆ ಮತ್ತು ಬರಗಾಲದ ಸಂದರ್ಭದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ಈ ಭಾಗ ದಕ್ಷಿಣ ಪ್ರಸ್ಥಭೂಮಿಯಾಗಿದ್ದು, ರಾಜ್ಯದ ಮಧ್ಯಭಾಗದಲ್ಲಿದೆ. ಅರೆ ಮಲೆನಾಡು ಮತ್ತು ಅರೆ ಉಷ್ಣವಲಯ ಪ್ರದೇಶವಾಗಿದೆ. ಜಿಲ್ಲೆಗೆ ಮೇ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ನೈರುತ್ಯ ಮಾನ್ಸೂನ್ ಮಳೆ ಬೀಳುತ್ತದೆ. ನವೆಂಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮಾನ್ಸೂನ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತದೆ.
ಮಳೆಯ ಅಭಾವದಿಂದ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಬರಗಾಲದ ಕಾರ್ಮೋಡ ಕವಿದಿದೆ. ಮಳೆಯ ಕೊರತೆಯೇ ಅಂತರ್ಜಲ ಮಟ್ಟ ವ್ಯಾಪಕವಾಗಿ ಕುಸಿಯಲು ಪ್ರಮುಖ ಕಾರಣ ಎನ್ನುತ್ತಾರೆ ಭೂವಿಜ್ಞಾನಿಗಳು.
ಜನವರಿಯಿಂದ ಮೇ ತಿಂಗಳವರೆಗೆ 120 ಮಿ.ಮೀ. ವಾಡಿಕೆ ಮಳೆಗೆ ಈ ಬಾರಿ ಜಿಲ್ಲೆಯಲ್ಲಿ 83 ಮಿ.ಮೀ. ಮಾತ್ರ ಮಳೆಯಾಗಿತ್ತು. ಅಂದರೆ, ಶೇ. 31ರಷ್ಟು ಕೊರತೆಯಾಗಿತ್ತು. ಜೂನ್ ತಿಂಗಳಲ್ಲಿ 119 ಮಿ.ಮೀ. ವಾಡಿಕೆ ಮಳೆಗೆ 48 ಮಿ.ಮೀ. ಮಳೆ ಬಿದ್ದು, ಶೇ. 60ರಷ್ಟು ಮಳೆ ಕೊರತೆ ಉಂಟಾಗಿದೆ.
ಜುಲೈನಲ್ಲಿ 164 ಮಿ.ಮೀ. ವಾಡಿಕೆ ಮಳೆಗೆ ಬರೋಬ್ಬರಿ 229 ಮಿ.ಮೀ. ಧಾರಾಕಾರ ಮಳೆ ಸುರಿಯಿತು. ಆಗಸ್ಟ್‌ನಲ್ಲಿ 127 ಮಿ.ಮೀ. ವಾಡಿಕೆ ಮಳೆಗೆ ಕೇವಲ 27 ಮಿ.ಮೀ. ಮಳೆಯಾದ ಕಾರಣ ಕೃಷಿ ಬೆಳೆಗಳು ಒಣಗಿದವು. ಸೆಪ್ಟೆಂಬರ್ ತಿಂಗಳಲ್ಲಿ 107 ಮಿ.ಮೀ. ವಾಡಿಕೆ ಮಳೆಗೆ ಕೇವಲ 39 ಮಿ.ಮೀ. ಮಳೆಯಾಗಿದ್ದು, ಶೇ 63ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್‌ನಲ್ಲಿ ಮುರ್ನಾಲ್ಕು ದಿನಗಳು ಮಾತ್ರ ತುಂತುರು ಮಳೆ ಬಿದ್ದಿದೆ.
ನೀರಿನ ಅಪವ್ಯಯ ಮತ್ತು ಅಂತರ್ಜಲದ ಅತಿ ಬಳಕೆ ಇದೇ ರೀತಿ ಮುಂದುವರಿದರೆ 2080ರ ವೇಳೆಗೆ ದೇಶದಲ್ಲಿ ಸದ್ಯದ ಸ್ಥಿತಿಗಿಂತ ಅಂತರ್ಜಲ ಮಟ್ಟ ಮೂರು ಪಟ್ಟು ಕುಸಿಯಲಿದೆ. ಇದು ಆಹಾರ ಮತ್ತು ನೀರಿನ ಅಭಾವ ಸೃಷ್ಟಿಗೂ ಕಾರಣವಾಗಲಿದೆ ಎಂದು ಅಧ್ಯಯನವೊಂದು ತಿಳಿಸಿದ್ದು, ಇದು ಎಚ್ಚರಿಕೆಯ ಗಂಟೆಯಾಗಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.