ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ದರ್ಪದ ವರ್ತನೆ ನಡೆಸಿದ ಪೋಲಿಸ್ ಅಧಿಕಾರಿ ಸಿಪಿಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಆಗ್ರಹಿಸಿದರು.
ಹಾವೇರಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಪೊಲೀಸರ ದೌರ್ಜನ್ಯ ಕುರಿತು ಮಾತನಾಡಿದ್ದಾರೆ.
ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಳೆದ ಒಂದು ತಿಂಗಳಿಂದ ಕಾಣೆಯಾದ ವಸತಿ ಶಾಲೆಯ ಪ್ರಾಚಾರ್ಯರನ್ನು ರಕ್ಷಿಸಲು ಪೋಲಿಸರು ಏಕೆ ಮುಂದಾದರು ಎಂಬುದು ತನಿಖೆಯಾಗಬೇಕು” ಎಂದು ಆಗ್ರಹಿಸಿದ್ದಾರೆ.
“ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಅಬ್ದುಲ್ ಕಲಾಮ್ ವಸತಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲ ವಿಶ್ವನಾಥ ಹುಲಸದಾರ ಎಂಬುವವರ ದುರ್ವರ್ತನೆ ಬಗ್ಗೆ ಇತ್ತೀಚಿನ ದಿನಗಳಲ್ಲಿ ವರದಿ ಬಂದಿತ್ತು. ಆ ವೇಳೆ ಅಲ್ಲಿನ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಅಲ್ಲಿನ ಸಿಬ್ಬಂದಿಗಳು ಪ್ರಾಂಶುಪಾಲರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು” ಎಂದು ಹೇಳಿದರು.
“ಪ್ರಾಂಶುಪಾಲರ ದುರ್ವರ್ತನೆ, ಅಲ್ಲಿನ ಕಟ್ಟಡ ಕಾಮಗಾರಿ ವಿಚಾರದಲ್ಲಿ ಅಕ್ರಮ ಎಸಗಿದ್ದು, ಅಲ್ಲದೆ ಬೇರೆಯವರಿಗೆ ತನ್ನ ಚಾರ್ಜ್ ಕೊಡದೆ, ಪ್ರಭಾರ ವಹಿಸದೇ ಏಕಾಏಕಿ ತಿಂಗಳುಗಳ ಕಾಲ ರಜೆಗೆ ತೆರಳಿದ್ದುದರಿಂದ ವಸತಿ ನಿಲಯದಲ್ಲಿ ಮಕ್ಕಳಿಗೆ ಆಹಾರ ಮತ್ತು ಇನ್ನಿತರ ಸಮಸ್ಯೆಗಳು ಎದುರಾಗಿದ್ದವು” ಎಂದರು.
“ವಿದಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ದುರ್ವರ್ತನೆಯಿಂದ ನಡೆದುಕೊಂಡಿರುವುದು ಮತ್ತು ಸಿಬ್ಬಂದಿಗಳಿಗೂ ಕಿರುಕುಳ ನೀಡಿರುವಂತಹ ಹತ್ತು ಹಲವು ಆರೋಪಗಳು ಕೇಳಿಬಂದಿದ್ದುವು” ಎಂದು ಹೇಳಿದರು.
“ಇಂತಹ ದುರ್ವರ್ತನೆಯ ಪ್ರಾಂಶುಪಾಲರು ಈ ವಸತಿ ನಿಲಯಕ್ಕೆ ಬೇಡವೆಂದು ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟಿಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದರು.
“ನೂರಾರು ವಿದ್ಯಾರ್ಥಿಗಳ ಮತ್ತು ಪಾಲಕರ ನೋವು, ಅವರ ಭಾವನೆಗಳನ್ನು ಅರಿಯದ ಪೊಲೀಸರು ಪ್ರತಿಭಟನಾಕಾರರ ಮೇಲೆಯೇ ದೈಹಿಕವಾಗಿ ಎರಗಿ ತಳ್ಳಾಡುವುದರ ಜೊತೆಗೆ ಬಂಧನದ ಬೆದರಿಕೆ ಹಾಕಿ ದರ್ಪದಿಂದ ವರ್ತಿಸಿದ್ದಾರೆ” ಎಂದರು.
“ಈ ಸಂದರ್ಭದಲ್ಲಿಸದ ವಿಶೇಷವಾಗಿ ಹಿರಿಯ ಪತ್ರಕರ್ತರು ಮತ್ತು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಎನ್ ವಾಸರೆ ಅವರ ಮೇಲೆ ದಬ್ಬಾಳಿಕೆ ನಡೆಸಿ ಬಂಧನದ ಬೆದರಿಕೆ ಹಾಕಿದ್ದಾರೆ. ಇದು ಅತ್ಯಂತ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಘಟನೆ ನಡೆಯುವ ಸಂದರ್ಭದಲ್ಲಿ ಸ್ವತಃ ಪೊಲೀಸ್ ಅಧಿಕಾರಿಗಳೇ ಮುಂದೆ ನಿಂತು ಪ್ರಾಂಶುಪಾಲರು ಪಲಾಯನ ಮಾಡಲು ಸಹಕರಿಸಿದ್ದಾರೆ” ಎಂದು ಆರೋಪಿಸಿದರು.
