ಶಾಲೆಯ ಆವರಣದಲ್ಲಿ ನಿಂತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಮೈ ಮೇಲೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಹಂಸಬಾವಿಯಲ್ಲಿ ನಡೆದಿದೆ.
ಗೌಸ್ ಮುಹಿಯುದ್ದೀನ್ ಎಂಬವರ ಪುತ್ರ ಮುಹಮ್ಮದ್ ಶಾ ಕಲಂದರ್(10) ಮೃತಪಟ್ಟ ಬಾಲಕ. ಹಂಸಬಾವಿಯ ಶಿವಯೋಗೇಶ್ವರ ಪ್ರೌಢಶಾಲೆಯ 4ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಕಲಂದರ್ ಶುಕ್ರವಾರ ಮಧ್ಯಾಹ್ನ ಊಟದ ವಿರಾಮದ ಸಂದರ್ಭ ಇನ್ನಿಬ್ಬರು ಗೆಳೆಯಯರಾದ ಶ್ರೇಯಸ್ ಮತ್ತು ಚೇತನ್ ಜೊತೆ ಶಾಲಾ ಆವರಣದಲ್ಲಿ ನಿಂತಿದ್ದರು. ಈ ವೇಳೆ ಅಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಕಲಂದರ್ ಮೈ ಮೇಲೆ ಬಿದ್ದಿದೆ. ಅಕ್ಕ–ಪಕ್ಕದಲ್ಲಿದ್ದ ಸ್ನೇಹಿತರಿಬ್ಬರಿಗೂ ವಿದ್ಯುತ್ ತಂತಿ ತಗುಲಿದೆ.
ತಕ್ಷಣ ಮೂವರೂ ವಿದ್ಯಾರ್ಥಿಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಕಲಂದರ್ ಕೊನೆಯುಸಿರೆಳೆದಿದ್ದರು. ಶ್ರೇಯಸ್ ಮತ್ತು ಚೇತನ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.