ತಂದೆಯ ಸಾವಿನ ನೋವಿನಲ್ಲೂ ಅಣ್ಣ-ತಂಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮನ ಮಿಡಿಯುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ಪಟ್ಟಣದಲ್ಲಿ ನಿನ್ನೆ ದಿನ ನಡೆದಿದೆ.
ರಾಣೆಬೆನ್ನೂರ ಪಟ್ಟಣದ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ರಕ್ಷಿತಾ ಹನುಮಂತಪ್ಪ ಲಮಾಣಿ ಮತ್ತು ಧನರಾಜ ಹಿಂದಿ ಪರೀಕ್ಷೆಗೆ ಹಾಜರಾದರು.
ತಾಲೂಕಿನ ಪದ್ಮಾವತಿಪುರ(ಬಸಲಿಕಟ್ಟಿ ತಾಂಡಾ)ದ 46 ವರ್ಷದ ಹನುಮಂತಪ್ಪ ಗುಡ್ಡಪ್ಪ ಲಮಾಣಿ ಶುಕ್ರವಾರ ಬೆಳಗಿನ ಜಾವ ಮನೆಯಲ್ಲೇ ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಕುಟುಂಬವೇ ಕಣ್ಣೀರ ಸಾಗರದಲ್ಲಿ ಮುಳುಗಿತ್ತು.
ಹಿಂದಿ ಎಸ್ಎಸ್ಎಲ್ಸಿಯ ಕೊನೆಯ ಪರೀಕ್ಷೆಯಾಗಿದ್ದು, ಸೇಂಟ್ ಲಾರೆನ್ಸ್ ಶಾಲೆಯಲ್ಲಿ ಓದುತ್ತಿದ್ದ ಧನರಾಜ ಹಾಗೂ ವಿದ್ಯಾಚೇತನ ಶಾಲೆಯಲ್ಲಿ ಓದುತ್ತಿದ್ದ ತಂಗಿ ರಕ್ಷಿತಾ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ತಂದೆ ಸಾವಿನ ದುಃಖವನ್ನು ನುಂಗಿಕೊಂಡು ಪರೀಕ್ಷೆ ಬರೆದು, ನಂತರ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಉದ್ಯೋಗ ಖಾತ್ರಿ ದಿನಕ್ಕೆ ₹ 370, ದುಡಿಯುವ ಕೈಗೆ ಕೆಲಸ: ಧರ್ಮರ ಕೃಷ್ಣಪ್ಪ
ಗಾರೆ ಕೆಲಸ ಮಾಡುತ್ತಿದ್ದ ಹನುಮಂತಪ್ಪ ಮಕ್ಕಳಿಬ್ಬರಿಗೆ ಉತ್ತಮ ಶಿಕ್ಷಣ ಕೊಡಿಸಿದ್ದು, ಮಕ್ಕಳ ಯಶಸ್ಸನ್ನು ಕಣ್ತುಂಬಿಕೊಳ್ಳುವ ಮೊದಲೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
