“ಹಾವೇರಿ ಜಿಲ್ಲಾದ್ಯಂತ ಕೆಲವೊಂದು ಕಂಪನಿಗಳು ಕಳಪೆ ಬೀಜ ಮಾರಾಟ ಮಾಡುತ್ತಿವೆ. ಇದರ ಹಿಂದೆ ದೊಡ್ಡ ಜಾಲವಿದೆ ಎನ್ನಲಾಗುತ್ತಿದೆ. ಹಾಗೂ ಕೆಲವೊಂದು ಖಾಸಗಿ ಕಂಪನಿಗಳು ಸರ್ಕಾರದ ಪರವಾನಿಗಿ ಇಲ್ಲದೆ ರೈತರಿಗೆ ಪೂರೈಸುತ್ತಿದ್ದಾರೆ” ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಆರೋಪಿಸಿದರು.
ಹಾವೇರಿ ಪಟ್ಟಣದ ಜಿಲ್ಲಾಡಳಿತ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಜಿಲ್ಲಾದ್ಯಂತ ಕಳಪೆ ಬೀಜ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಜರುಗಿಸುವಂತೆ ಉಪ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಅವೈಜ್ಞಾನಿಕವಾಗಿ ಕಳಪೆ ಬೀಜವನ್ನು ತಯಾರಿಸುತ್ತಿರುವುದು ಇಲಾಖೆಯ ಕೆಲವೊಂದು ಅಧಿಕಾರಿಗಳ ಗಮನಕ್ಕೆ ಇದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ರೈತರು ಸಾಲ ತೆಗೆದು ಬಿತ್ತನೆಗಾಗಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡುತ್ತಿದ್ದಾರೆ. ಆದರೆ ಬಿತ್ತನೆ ಮಾಡಿದ ಬೀಜಗಳು ಮೊಳಕೆಯಾಗದೆ ಮತ್ತು ಹುಟ್ಟದೆ ಇರುವುದರಿಂದ ರೈತರಿಗೆ ಬಹಳ ನಷ್ಟವನ್ನು ಅನುಭವಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರೈತರು ಇಂತಹ ಕಳಪೆ ಬೀಜ ಬಿತ್ತನೆ ಮಾಡಿ ಯಾವುದೇ ರೀತಿ ಫಸಲುಗಳು ತಮ್ಮ ಕೈಗೆ ಸಿಗುವುದಿಲ್ಲ. ತಾವು ಸಾಲ ಮಾಡಿ ತಮ್ಮ ಸಾಲವನ್ನು ತೀರಿಸಲಾಗ ಸಂಕಟದಲ್ಲಿದ್ದಾರೆ. ಆದ್ದರಿಂದ ಈ ಕಳಪೆ ಬೀಜ ಮಾರಾಟ ಮಾಡುತ್ತಿರುವ ಕಂಪನಿಗಳು ಹಾಗೂ ಅಂಗಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವ್ಯಾಪ್ತಿಗೆ ಬರುವ ತಾಲ್ಲೂಕಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದರು.
“ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಾರು ಅಪಘಾತದ ಕುರಿತು ಶಾಸಕ ಲಕ್ಷ್ಮಣ ಸವದಿ ಮಾಹಿತಿ
ಮನವಿ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಉಪಾಧ್ಯಕ್ಷರು ಯೂಸುಫ್ ಸೈಕಲಗಾರ, ಜಿಲ್ಲಾ ಮಹಿಳಾ ಅಧ್ಯಕ್ಷರು ಗೀತಾಬಾಯಿ ಲಮಾಣಿ, ಹಾವೇರಿ ತಾಲೂಕ ಅಧ್ಯಕ್ಷರು ರಾಜೇಸಾಬ ಮನೇಗಾರ, ಗೌರವಾಧ್ಯಕ್ಷರು ಪ್ರದೀಪ್ ಗೌಡರ್, ಬ್ಯಾಡಗಿ ತಾಲೂಕ ಅಧ್ಯಕ್ಷರು ಬಸವರಾಜ ಪಟ್ಟಣಶೆಟ್ಟಿ , ರಟ್ಟೀಹಳ್ಳಿ ತಾಲೂಕ ಅಧ್ಯಕ್ಷರು ರಾಮಚಂದ್ರಪ್ಪ ಹಿಂಡಸ್ಗಟ್ಟಿ , ಮುಖಂಡರು ಕಾರ್ಯಕರ್ತರು ಸನಾವುಲ್ಲಾ ಪುರದಗೇರಿ, ರವಿ ಮಾಮನಿ, ಹೊನ್ನೂರ್ಸಾಬ್ ಕೊಪ್ಪಳ, ರೇಷ್ಮಾ ಬಿರಬ್ಬಿ, ಇಮ್ರಾನ್ ಪುರದ್ಗೇರಿ, ಅನ್ನಪೂರ್ಣ ಅರಕೇರಿ, ಜ್ಯೋತಿ ಅರ್ಕಸಾಲಿ, ಅನಿಲ್ ಮಾವರ್ಕರ್ , ಇಸ್ಮಾಯಿಲ್, ನಾಸಿರ್ ಸಾಬ್ ಸೈಕಲಗಾರ, ಯುವರಾಜ್ ಕರಾಟೆ, ನನ್ನೇ ಸಾಬ್ ಹಗಡಿ, ಚೆನ್ನಪ್ಪ ಎಮ್ಮಿ , ಇನ್ನು ಅನೇಕರು ಉಪಸ್ಥಿತರಿದ್ದರು.