“ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸದಿಂದ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಆಡಳಿತ ಮಂಡಳಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಸಹಕಾರಿ ಸಂಘಗಳು ಅಭಿವೃದ್ಧಿಯತ್ತ ಮುಖ ಮಾಡಲಿವೆ” ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ಇಲ್ಲಿ ಹೊಸದಾಗಿ ಆರಂಭಿಸಲಾಗಿರುವ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.
“ಗ್ರಾಮೀಣ ಭಾಗದ ಬಡವರು, ಮಧ್ಯಮ ಹಾಗೂ ರೈತಾಪಿ ವರ್ಗಕ್ಕೆ ಬ್ಯಾಂಕಿನ ಸಕಲ ಸೌಲಭ್ಯಗಳು ದೊರಕಬೇಕಿದೆ. ಬ್ಯಾಂಕುಗಳು ಕೇವಲ ಆರ್ಥಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೇ ಬೇರೆ ಬೇರೆ ನಾಗರೀಕ ಸೇವೆಗಳನ್ನೂ ಸಹ ನೀಡಲು ಮುಂದೆ ಬರಬೇಕಿದೆ. ಸಾಲ ಮಂಜೂರಾತಿ ಪ್ರಕ್ರಿಯೆ ಸರಳಗೊಳಿಸಿ ಅರ್ಹರಿಗೆ ಸುಲಭವಾಗಿ ಸಾಲ ಸೌಲಭ್ಯ ದೊರಕುವಂತೆ ಕಾಳಜಿ ವಹಿಸಬೇಕಿದೆ” ಎಂದರು.
“ಸಾಲಗಾರರೂ ಸಹ ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕೆ ಸದ್ಬಳಕೆ ಮಾಡಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಆರ್ಥಿಕ ಪ್ರಗತಿ ಕಾಣಲಿದ್ದು, ಇನ್ನಷ್ಟು ಜನರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಶಾಖೆಗಳನ್ನು ಹೊಂದಿರುವ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಾನಗಲ್ ನಗರದಲ್ಲಿ ಸಹ ಶಾಖೆ ತೆರೆಯುತ್ತಿರುವುದು ಖುಷಿ ತಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸೌಹಾರ್ದತೆಯಿಂದ ಬಕ್ರೀದ್ ಆಚರಿಸಿ: ಜಿಲ್ಲಾಧಿಕಾರಿ ನಳಿನ್ ಅತುಲ್
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಸ್.ಎ.ಪೀರಜಾದೆ, ಮುಖಂಡರಾದ ಮುಜೀಬ್ ಬಾಳೂರ, ದುದ್ದು ಅಕ್ಕಿವಳ್ಳಿ, ನಾಸೀರ್ ಖಾಜಿ, ನಿಸಾರ ಪಾನವಾಲೆ, ಮುಸ್ತಾಕ್ ಸುತಾರ, ಇರ್ಫಾನ್ ಮಿಠಾಯಿಗಾರ, ಚಮನಸಾಬ ಕಿತ್ತೂರ, ಎಂ.ಎಂ.ಮುಲ್ಲಾ, ಇಲಿಯಾಸ್ ಶಿರಸಿ, ಬಾಬಾಜಾನ್ ಕೊಂಡವಾಡಿ, ಹನೀಫ್ ಜಾಲೆಗಾರ, ತನ್ನೀರ್ ಮಾಸೂರ, ನವೀದ್ ಯಾವಗಲ್ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
